ಕೆ.ಆರ್.ಪೇಟೆ : ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮೃತಪಟ್ಟ ತಾಲೂಕಿನ ಕತ್ತರಘಟ್ಟ ಮೂಲದ ನಿಹಾಲ್ ಹಾಗೂ ಲೀಲಾವತಿ(ಅಜ್ಜಿ-ಮೊಮ್ಮಗ) ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿದರು.
ಇದೇ ಕುಟುಂಬದ ಮೂರು ಜನರು ವಯನಾಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಹಾಗೂ ಅಗತ್ಯ ಸಹಕಾರ ನೀಡುವ ಮೂಲಕ ಸಮನ್ವಯ ವಹಿಸಲು ರಾಜ್ಯ ಸರ್ಕಾರದಿಂದ ಅಧಿಕಾರಿಗಳ ತಂಡ ವಯನಾಡಿಗೆ ತೆರಳಿದೆ. ಗಾಯಾಳುಗಳಿಗೆ ಅಗತ್ಯವಿರುವ ಪ್ರಾಥಮಿಕ ಚಿಕಿತ್ಸೆಯನ್ನು ವಯನಾಡಿನಲ್ಲಿ ಒದಗಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ರಾಜ್ಯ ಸರ್ಕಾರದಿಂದ ಒದಗಿಸಲಾಗುವುದು ಎಂದು ಕುಟುಂಬದವರಿಗೆ ಮಾಹಿತಿ ನೀಡಿದರು.
5 ಲಕ್ಷ ರೂ. ಪರಿಹಾರ: ಮೃತ ಲೀಲಾವತಿ ಅವರಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರವನ್ನು ಶೀಘ್ರ ವಿತರಣೆ ಮಾಡಲಾಗುವುದು. ನಿಹಾಲ್ ಚಿಕ್ಕ ಹುಡುಗನಾಗಿದ್ದು, ಆತನಿಗೂ ಸಣ್ಣ ಪ್ರಮಾಣದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಅಂತ್ಯಕ್ರಿಯೆ ಹಾಗೂ ಮುಂತಾದ ಕಾರ್ಯಗಳಿಗೆ ಸಹಾಯವಾಗಲಿ ಎಂದು ಸಚಿವರು ವೈಯಕ್ತಿಕವಾಗಿ ಪರಿಹಾರ ನೀಡಿದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ಹಲವರಿದ್ದರು.