ಜಿಲ್ಲೆ

ತಾಲೂಕು ಸಮಗ್ರ ಅಭಿವೃದ್ಧಿಗೆ ಬದ್ಧ

ರೇಷ್ಮೆ ನಗರ ಡೆಸ್ಕ್

 ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ | ಮಹಾಲಿಂಗೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ

ಮಾಗಡಿ : ತಾಲೂಕು ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಕಂಕಣಬದ್ಧರಾಗಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ತಾಲೂಕಿನ ಹಲಸಬೆಲೆ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾಲಿಂಗೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಲಾಗುತ್ತಿದೆ ಎಂದರು.

ಆಧುನಿಕತೆ ನಮ್ಮೆಲ್ಲರನ್ನು ನಿದ್ದೆಗೆಡಿಸಿದೆ. ಮನೆ ಬಂಗಲೆ ಕಟ್ಟಿಸುತ್ತೇವೆ. ಐಶಾರಾಮಿ ಕಾರಿನಲ್ಲಿ ಓಡಾಡುತ್ತಿದ್ದೇವೆ. ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯಿಲ್ಲ, ಮನುಷ್ಯ ಭೂಮಿ ಮೇಲೆ ಜನಿಸಿ, ಜೀವನದಲ್ಲಿ ಸಾಯುವವರೆವಿಗೂ ದೇವಾಲಯವನ್ನು ಅವಲಂಭಿಸುತ್ತೇವೆ ಎಂದು ಹೇಳಿದರು.

ಐಶಾರಾಮಿ ಜೀವನದಿಂದ ರಾತ್ರಿ ನಿದ್ದೆ ಬಾರದೆ ಮದ್ಯ ಕುಡಿದು ನಿದ್ದೆಗೆ ಜಾರಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಯುವಕರು ದಾರಿ ತಪ್ಪುತ್ತಿದ್ದು, ನಶೆಯಲ್ಲಿಯೇ ತೇಲುತ್ತಿದ್ದಾರೆ. ಅವರಿಗೆ ಧರ್ಮ ಪ್ರವಚನವಾಗಬೇಕು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ನಾವೆಲ್ಲರೂ ಸುಖ, ಶಾಂತಿ ನೆಮ್ಮದಿಗಾಗಿ ಧರ್ಮ ಮಾರ್ಗದಲ್ಲಿ ನಡೆಯಬೇಕು. ಎಷ್ಟೇ ಹಣ, ಐಶ್ವರ್ಯವಿದ್ದರೂ ಮನುಷ್ಯನಿಗೆ ನೆಮ್ಮದಿಯಿಲ್ಲ, ಜನಮಾನಸದಲ್ಲಿ ದೇಗುಲಗಳು ಅವಶ್ಯಕತೆಯಿದೆ ಎಂದು ತಿಳಿಸಿದರು.

ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಮನುಷ್ಯನಿಗೆ ಶಾಂತಿ ನೆಮ್ಮದಿ ಸಿಗುವ ತಾಣ ದೇವಸ್ಥಾನಗಳು. ಅನಾಧಿಕಾಲದಿಂದಲೂ ಸನಾತನ ಧರ್ಮದಲ್ಲಿ ದೇಗುಲವನ್ನು ನಿರ್ಮಿಸಿಕೊಂಡು ಬರುವ ಸಂಸ್ಕೃತಿ ನಮ್ಮದು. ತಾಲೂಕಿನ ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ,ಬಿಜೆಪಿ ಬೆಲ್ಟ್ ಆಗಿದ್ದ ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಭಾವುಟ ಹಾರಿಸಿ ಕಾಂಗ್ರೆಸ್ ನೆಲೆಯನ್ನು ಕೊಟ್ಟ ಕುಟುಂಬವಿದು ಎಂದು ಸ್ಮರಿಸಿದರು.

ದೇಗುಲದ ಆವರಣದಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ರುದ್ರಾಕ್ಷಿ ಗಿಡ ನೆಟ್ಟರು. ಶಾಸಕ ಎಚ್.ಸಿ. ಬಾಲಕೃಷ್ಣ ಬಿಲ್ವಪತ್ರೆಗಿಡ, ಎಚ್.ಎಂ.ರೇವಣ್ಣ ಸಂಪಿಗೆ ಸಸಿ ನೆಟ್ಟರು. ಗಿಡಗಳ ಸಂರಕ್ಷಣೆಗೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ಜೆ.ಪಿ. ಚಂದ್ರೇಗೌಡ, ದೋಣಕುಪ್ಪೆ ರಾಮಣ್ಣ, ಸಂಸ್ಕೃತ ಸಂಘದ ಅಧ್ಯಕ್ಷ ಗಂಗಾಧರ್, ಎಲ್.ನಂಜಯ್ಯ, ನಂಜುಂಡಪ್ಪ, ಮಹಾದೇವಯ್ಯ, ಕುಮಾರ್, ಮಂಜುನಾಥ್, ಶಿವಣ್ಣ, ಜೀವನ್, ಸುರೇಶ್, ರಮೇಶ್, ರಾಜಣ್ಣ, ದೇವರಾಜು, ಮಹೇಶ್ ಕೆಂಪಣ್ಣ ತಹಸೀಲ್ದಾರ್ ಶರತ್‌ಕುಮಾರ್, ತಾಪಂ ಇಒ ಜಯಪಾಲ್, ವಲಯ ಅರಣ್ಯಾಧಿಕಾರಿ ಚೈತ್ರಾ, ಶುಭಾ, ಸಾಮಾಜಿಕ ಅರಣ್ಯಾಧಿಕಾರಿ ಮಂಜುನಾಥ್ ಇತರರು ಇದ್ದರು.