ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬುದ್ಧಿವಂತರು, ಪ್ರತಿಭಾವಂತರು ರಾಜಕೀಯ ರಂಗಕ್ಕೆ ಪ್ರವೇಶಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕು. ಉತ್ತಮ ನಡತೆಯ, ಬದ್ಧತೆಯುಳ್ಳ ರಾಜಕಾರಣಿ ದೇಶದ ಸ್ಥಿತಿಯನ್ನು ಬದಲಾಯಿಸಬಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಂಗ ಸಂಸ್ಥೆಯಾದ ಯಂಗ್ ಇಂಡಿಯನ್ಸ್ ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರಾದೇಶಿಕ ಮಟ್ಟದ ಕಲ್ಪಿತ ಸಂಸತ್ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಪಾಲಕರು ಬಯಸುತ್ತಾರೆ. ರಾಜಕಾರಣಿ ಆಗಲೆಂದು ಬಯಸುವುದಿಲ್ಲ. ಪ್ರಜಾಪ್ರಭುತ್ವಕ್ಕೆ ಒಳ್ಳೆಯ ರಾಜಕಾರಣಿ ಅವಶ್ಯಕ. ಈ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ಪ್ರೇರಣೆ ನೀಡಬೇಕು ಎಂದರು.
ಕೆಲ ದೇಶಗಳಲ್ಲಿ ಸೇನೆಯ ಆಡಳಿತವಿದೆ. ಪಾಕಿಸ್ತಾನದಲ್ಲಿ ಶಾಸನವಿಲ್ಲದ ಸರ್ಕಾರವಿದೆ. ಬಾಂಗ್ಲಾದೇಶದಲ್ಲಿ ಮತ್ತೊಂದು ರೀತಿಯ ಸರ್ಕಾರವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಉತ್ತಮ ಆಡಳಿತಕ್ಕೆ ಮಾರ್ಗ. ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೆ ವಿಶ್ವದಲ್ಲಿಯೇ ಉತ್ತಮ ಸಂವಿಧಾನವನ್ನು ರೂಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಪ್ರಾದೇಶಿಕ ಅಧ್ಯಕ್ಷ ಡಾ. ಶ್ರೀನಿವಾಸ ಜೋಶಿ ಸ್ವಾಗತಿಸಿದರು. ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ನಾಗರಾಜ ನಾಯಕ, ಉಜ್ವಲ ಸಿಂಘಿ, ಅನೀಶ್ ಅಭಯಂಕರ, ಕೋಮಲ ಷಾ, ಮಿಥಿಲಾ ಸುರೇಬಾನ, ಇತರರು ಇದ್ದರು.
216 ವಿದ್ಯಾರ್ಥಿಗಳು ಭಾಗಿ
ಯಂಗ್ ಇಂಡಿಯನ್ಸ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ವಿಶಾಲಕುಮಾರ ಅಗರ್ವಾಲ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಆಡಳಿತ ನಡೆಸುವ ಕಲೆ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಇಂಥ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಂಸ್ಥೆಯ ದರ್ಶನ ಮುಥಾ ಮಾತನಾಡಿ, ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಪ್ರಾದೇಶಿಕ ಮಟ್ಟದ ಕಲ್ಪಿತ ಸಂಸತ್ ಸ್ಪರ್ಧೆಯಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಹಾಗೂ ಸಂಪೂರ್ಣ ಗೋವಾ ರಾಜ್ಯ ಸೇರಿ 216 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ವಿವರಿಸಿದರು.