ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮಕ್ಕಳ ಪೌಷ್ಟಿಕತೆ ಪುನಃಶ್ಚೇತನ ಘಟಕಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಭೇಟಿ ನೀಡಿ ಪರಿಶೀಲಿಸಿದರು. ಕೆ.ಕೆ. ಚೌವ್ಹಾಣ, ಸಾವಿತ್ರಿ ಗುಗ್ಗರಿ ಇತರರಿದ್ದರು. 
ಜಿಲ್ಲೆ

ಅಪೌಷ್ಟಿಕತೆ ನಿವಾರಣೆಗೆ ಬದ್ಧರಾಗಿ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸರ್ವರ ಸಹಕಾರ ಅಗತ್ಯ. ಜಿಲ್ಲೆಯನ್ನು ಮಕ್ಕಳ ಅಪೌಷ್ಟಿಕತೆ ಮುಕ್ತವಾಗಿಸಲು ಕಂಕಣಬದ್ಧರಾಗೋಣ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮಕ್ಕಳ ಪೌಷ್ಟಿಕತೆ ಪುನಃಶ್ಚೇತನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಯಾವುದೇ ಮಗು ಸಹ ಅಪೌಷ್ಟಿಕತೆಯಿಂದ ಬಳಲಬಾರದು ಎನ್ನುವ ಸದುದ್ದೇಶದಿಂದ ಹಲವಾರು ವರ್ಷಗಳಿಂದ ವಿವಿಧ ಯೋಜನೆಗಳ ಮೂಲಕ ಸಾಕಷ್ಟು ಪ್ರಯತ್ನ ನಡೆದಿದೆ. ಆದರೂ ಅಪೌಷ್ಟಿಕತೆಯಿಂದ ಮುಕ್ತ ಆಗದೇ ಇರುವುದು ನೋವಿನ ಸಂಗತಿ ಎಂದರು.

ಮಕ್ಕಳ ಪುನಃಶ್ಚೇತನ ಘಟಕವು ಉತ್ತಮವಾದ ಪರಿಸರದಲ್ಲಿ ಇರಬೇಕು ಎಂದು ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳಿಗೆ ತಿಳಿಸಿದ ಅವರು ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಬಗ್ಗೆ ಮೆನು ಅಳವಡಿಸದೆ ಇರುವುದನ್ನು ಕಂಡು ತರಾಟೆಗೆ ತೆಗೆದುಕೊಂಡರು. ದಾಖಲಾದ ಎಲ್ಲಾ ಮಕ್ಕಳಿಗೆ ಸಕಾಲಕ್ಕೆ ಪೌಷ್ಟಿಕ ಆಹಾರ ನೀಡಬೇಕು ಮತ್ತು ಜೊತೆಯಲ್ಲಿ ಬಂದವರಿಗೆ ದಿನಗೂಲಿ ಭತ್ಯೆ ನೀಡಬೇಕು ಎಂದು ಹೇಳಿದರು.

ನಂತರ ಆಸ್ಪತ್ರೆಯ ಮಕ್ಕಳ ತುರ್ತು ಚಿಕಿತ್ಸಾ ಘಟಕ ಸೇರಿದಂತೆ ವಿವಿಧ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಜತೆಗೆ ಮಕ್ಕಳ ಆರೋಗ್ಯದ ಬಗ್ಗೆ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚೌವ್ಹಾಣ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಾವಿತ್ರಿ ಗುಗ್ಗರಿ, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.