ಜಿಲ್ಲೆ

ಸದೃಢ ಸಮಾಜ ನಿರ್ಮಾಣಕ್ಕೆ ಪಣ ತೊಡಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಸದೃಢ ಸಮಾಜ ನಿರ್ಮಾಣಕ್ಕೆ ಯುವಕರು ಪಣ ತೊಡಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಕರೆ ನೀಡಿದರು.


ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನ 18ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಮಾಜ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ. ಬಡವರು ಹಾಗೂ ಸಮಾಜದ ಏಳಿಗೆಗೆ ಆದ್ಯತೆ ನೀಡಬೇಕು. ಪ್ರಾಮಾಣಿಕ ಸಮಾಜ ಸೇವೆ ಮಾಡುವಂತಹ ಸಂಘಟನೆಗಳು ಹುಟ್ಟುವುದು ಅಗತ್ಯವಾಗಿದೆ. ಅಸಮಾನತೆ ಹೋಗಲಾಡಿವುದು ಎಲ್ಲರ ಮುಖ್ಯ ಗುರಿಯಾಗಬೇಕು ಎಂದರು.
ಹಿರಿಯ ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಸ್ಥೆಗಳು ಬರೀ ಲೇಟರ್‌ಹೆಡ್‌ಗೆ ಸೀಮಿತಗೊಂಡಿದ್ದು, ಅವುಗಳ ಹೊರತಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ 18 ವರ್ಷಗಳಿಂದ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.


ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ‘ವಿಜಯವಾಣಿ’ ದಿನಪತ್ರಿಕೆ ಮುಖ್ಯ ವರದಿಗಾರ ಆರ್.ಕೃಷ್ಣ (ಮಾಧ್ಯಮ), ಕೆ.ಬಿ.ಲಿಂಗರಾಜು (ಕೈಗಾರಿಕಾ), ಡಾ.ವೈ.ಡಿ. ರಾಜಣ್ಣ (ಸಾಹಿತ್ಯ), ಸಿ.ಎಂ.ಶ್ರೀಧರ್ (ಸೈನಿಕರು), ಶಿವಪ್ರಸಾದ್ (ಆರೋಗ್ಯ), ರಶ್ಮಿ (ಆರೋಗ್ಯ), ಅಮ್ಮ ರಾಮಚಂದ್ರ (ಜಾನಪದ), ಡಾ.ಕವಿತಾ ಮಠದ (ಶಿಕ್ಷಣ), ಮಲ್ಲೇಶ್ (ಆರೋಗ್ಯ), ಶೋಭಾ (ರೂಪದರ್ಶಿ) ಅವರಿಗೆ ಚಾಣಕ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಉದ್ಯಮಿ ಸ್ವೀಟ್ ಮಹೇಶ್, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಇನ್ನಿತರರಿದ್ದರು.