ಕನಕಗಿರಿ: ಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮ ಎಂದೇ ಬಿಂಬಿತವಾಗಿರುವ ಸಂವಿಧಾನ ಪೀಠಿಕೆ ಸರ್ವರೂ ಒಪ್ಪಿಕೊಂಡಾಗ ಮಾತ್ರ ಅಭಿವೃದ್ಧಿ ಪೂರಕ ಮಾದರಿ ಸಮಾಜ ನಿರ್ಮಾಣದ ಆಶಯ ಸಾಕಾರಗೊಳ್ಳುತ್ತದೆ ಎಂದು ಕೊಪ್ಪಳ ವಿವಿಯ ಉಪನ್ಯಾಸಕಿ ಡಾ.ಗೀತಾ ಪಾಟೀಲ್ ಹೇಳಿದರು.
ಇಲ್ಲಿನ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವದ ಮೌಲ್ಯವನ್ನು ಪ್ರದರ್ಶಿಸುವ ಬದ್ಧತೆಯನ್ನು ಪ್ರಜೆಗಳಾಗಿ ನಾವು ತೋರಿಸಬೇಕು. ನಾಗರೀಕರಾಗಿ ಅಂತರ್ಗತ, ಸಮಾನ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಬೇಕಾಗಿದೆ.
ಜಾತಿ, ಸಂಘರ್ಷ ಮತ್ತು ಧರ್ಮಾಧಾರಿತ ರಾಜಕಾರಣ ದೇಶದ ಹಿತಾಸಕ್ತಿಗೆ ಮಾರಕ. ಈ ನಿಟ್ಟಿನಲ್ಲಿ ಪೀಠಿಕೆಯನ್ನು ಓದಿ, ಮಹತ್ವ ಅರಿತುಕೊಳ್ಳುವುದು ಮುಖ್ಯ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಮಾತನಾಡಿ, ಸಂವಿಧಾನದ ಪೀಠಿಕೆಯಲ್ಲಿನ ಸಾರ್ವಭೌಮ, ಸಮಾಜವಾದ, ಜಾತ್ಯತೀತ,
ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವ ಮತ್ತು ಮೂಲ ಆಶಯಗಳೊಂದಿಗೆ ಸರ್ವಜನಾಂಗದ ಶಾಂತಿಯ ತೋಟ ರೂಪಿಸುವ ಉದ್ದೇಶ ಈ ವಾಕ್ಯಗಳಲ್ಲಿ ಅಡಕವಾಗಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆಗಳನ್ನು ಒಳಗೊಂಡ ನ್ಯಾಯಯುತ ಸಮಾಜವನ್ನು ಸೃಷ್ಟಿಸಿ, ಎಲ್ಲರನ್ನೂ ಒಳಗೊಂಡು ಪ್ರಗತಿ ಸಾಧಿಸಲು ಪ್ರೇರಣೆಯಾಗಿದೆ.
ಈ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ಮೂಲಭೂತ ಹಕ್ಕು ನೀಡಿ ಘನತೆಯನ್ನು ಹೆಚ್ಚಿಸಿ ಆಪ್ತತೆಯ ವಾತಾವರಣ ರೂಪಿಸುತ್ತದೆ. ಜತೆಗೆ ವೈಯಕ್ತಿಕ ಸ್ವಾತಂತ್ರೃಕ್ಕೂ ಅನುವು ಮಾಡಿಕೊಡುತ್ತಿದೆ ಎಂದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಮೆಹಬೂಬ್ ಹುಸೇನ್, ಪ್ರಾಧ್ಯಾಪಕರಾದ ಡಾ.ವೀರೇಶ, ಮರ್ವಿನ್ ವಿಕ್ಟರ್ ಡಿಸೋಜಾ, ಡಾ. ಆಶಿಕಾ ಎಚ್.ಸಿ, ಸಹಾಯಕರಾದ ವೆಂಕಟೇಶ್ ಇತರರಿದ್ದರು.