ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ಹು-ಧಾ ಪೊಲೀಸ್ ಆಯುಕ್ತರ ಎನ್. ಶಶಿಕುಮಾರ ಮಂಗಳವಾರ ಭೇಟಿ ನೀಡಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ಕಿಮ್ಸ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಕಾಲೇಜ್ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಮತ್ತು ಭದ್ರತೆ ಕುರಿತು ಚರ್ಚಿಸಿದರು. ತುರ್ತು ಸಂದರ್ಭದಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದರು.
ಸಿದ್ಧಾರೂಢ ಮಠ, ಮೂರು ಸಾವಿರ ಮಠ, ಫತೇಶಾ ಅಲಿ ದರ್ಗಾ, ಕೇಶ್ವಾಪುರ ಶಾಂತಿನಗರ ಚರ್ಚ್‌ಗಳಂತಹ ಧಾರ್ಮಿಕ ಕೇಂದ್ರಗಳಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದು, ಧಾರ್ಮಿಕ ಕೇಂದ್ರದ ಮುಖ್ಯಸ್ಥರ ಜತೆಗೆ ಚರ್ಚಿಸಿದರು. ಜಾತ್ರೆ ಸಮಯ, ಹೆಚ್ಚಿನ ಜನ ಸೇರುವಂತಹ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂದರ್ಭಗಳಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ಪೊಲೀಸ್ ನಿಯೋಜನೆ, ಬಂದೋಬಸ್ತ್, ಸೂಕ್ತ ಸಂಚಾರ ವ್ಯವಸ್ಥೆಗಳ ಬಗ್ಗೆ ಸಮಾಲೋಚನೆ ನಡೆಸಿದರು.