ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ಸಮಸ್ಯೆಗಳನ್ನು ಆಲಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಂದಾಗಿದ್ದು, ಪ್ರತಿ ತಿಂಗಳ 2ನೇ ಶನಿವಾರ ‘ಸಂಚಾರ ಸಂಪರ್ಕ ಸಭೆ’ ನಡೆಸಲು ನಿರ್ಧರಿಸಿದ್ದಾರೆ. ಮೊದಲ ಸಭೆ ಶನಿವಾರ(ಡಿ.12) ಆರಂಭವಾಗಲಿದೆ. ವೈಟ್ ಫೀಲ್ಡ್ ಸಂಚಾರ ಠಾಣೆಯಲ್ಲಿ ಜನರನ್ನು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಆಯುಕ್ತ ಕಮಲ್ ಪಂತ್ ಭೇಟಿಯಾಗಿ ಅಹವಾಲು ಆಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಾಹನ ಸಂಚಾರ ಸಂಬಂಧಿಸಿದ ಸಲಹೆ ಮತ್ತು ಸಮಸ್ಯೆಗಳ ಪರಿಹಾರದ ಬಗ್ಗೆ ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸದ್ಬಳಕ್ಕೆ ಮಾಡಿಕೊಳ್ಳುವಂತೆ ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ ಮನವಿ ಮಾಡಿದ್ದಾರೆ.
ಇತ್ತೀಚಿಗೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ಕೃತ್ಯಗಳ ಸಂಬಂಧ ಆಯುಕ್ತ ಕಮಲ್ ಪಂತ್ ನಡೆಸಿದ್ದ ಜನ ಸಂಪರ್ಕ ಸಭೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆ ಕಾರ್ಯಕ್ರಮದಲ್ಲಿ ಸಂಚಾರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಹಲವು ಜನರು ಮನವಿ ಸಲ್ಲಿಸಿದ್ದರು. ಕೋರಿಕೆ ಮೇಲೆ ಸಂಚಾರ ಸಮಸ್ಯೆ ಆಲಿಸಲು ಜನ ಸಂಪರ್ಕ ಸಭೆ ನಡೆಸಲಾಗುತ್ತಿದೆ. ಆಟೋ ಚಾಲಕರು, ವಾಹನ ಸವಾರರು, ಪ್ರಯಾಣಿಕರು, ನಾಗರಿಕ ಹಿತ ರಕ್ಷಣಾ ಸಮಿತಿಗಳ ಸದಸ್ಯರು ಹಾಗೂ ವಾಣಿಜ್ಯ ಬಳಕೆದಾರರು ಸೇರಿ ಜನರನ್ನು ಆಹ್ವಾನಿಸಿದ್ದಾರೆ.