ಅಥಣಿ: ಎಲ್‌ಐಸಿ ಪ್ರತಿನಿಧಿಗಳಿಗೆ ಜೀವ ವಿಮಾ ಸಂಸ್ಥೆ ಕಡಿಮೆಗೊಳಿಸಿರುವ ಕಮಿಷನ್ ದರ ಕೂಡಲೇ ಹೆಚ್ಚಿಸಬೇಕೆಂದು ಆಗ್ರಹಿಸಿ ತಾಲೂಕು ಎಲ್‌ಐಸಿ ಏಜೆಂಟರ್ ಸಂಘದಿಂದ ಗೋಕಾಕದಲ್ಲಿ ಸಂಸದೆ ಪಿಯಾಂಕಾ ಜಾರಕಿಹೊಳಿ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.
ಹಿರಿಯ ಪ್ರತಿನಿಧಿ ಪ್ರಭಾಕರ ಚವಾಣ ಮಾತನಾಡಿ, 1956 ರಿಂದ ಈವರೆಗೆ ವಿಮಾ ಪ್ರತಿನಿಧಿಗಳ ಕಮಿಷನ್ ದರ ಹೆಚ್ಚಿಸಿಲ್ಲ. ಆದರೀಗ, ದಿಢೀರ್‌ನೆ ದೇಶಾದ್ಯಂತ ಎಲ್‌ಐಸಿ ಅವಲಂಬಿಸಿ ಬದುಕು ಸಾಗಿಸುತ್ತಿರುವ ಲಕ್ಷಾಂತರ ವಿಮಾ ಪ್ರತಿನಿಧಿಗಳ ಕಮಿಷನ್ ದರ ಕಡಿಮೆಗೊಳಿಸಲಾಗಿದೆ ಎಂದು ದೂರಿದರು.
ಮನವಿಗೆ ಸ್ಪಂದಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪ್ರತಿನಿಧಿಗಳ ಸಮಸ್ಯೆ ಕುರಿತಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸುವ ಜತೆಗೆ ಹಣಕಾಸು ಸಚಿವರೊಂದಿಗೆ ಸಮಾಲೋಚಿಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ವಿಮಾ ಪ್ರತಿನಿಧಿಗಳಾದ ಚಂದ್ರು ಪಾಟೀಲ, ನಿಂಗಮೇಶ ಗೂಳಪ್ಪನವರ, ಸುನೀಲ ಮೇತ್ರಿ, ಗೀತಾ ಕಮತೆ, ಜಯಶ್ರೀ ಅವಟಿಮಠ, ಎಂ.ಬಿ.ಕೆಂಪಿಪಾಟೀಲ, ಪರಮೇಶ್ವರ ಸಂಕ್ರಟ್ಟಿ ಇತರರಿದ್ದರು.