ಶಿವಮೊಗ್ಗ: ಕ್ರಾನಿಕ್ ಪ್ಯಾಂಕ್ರಿಯಾಟೈಟಿಸ್ ಕಾಯಿಲೆಗೆ ರೋಗಿಯಿಂದ ಹಣ ಪಡೆದು ಚಿಕಿತ್ಸೆ ಮತ್ತು ಔಷಧ ನೀಡದ ದಾವಣಗೆರೆಯ ಹೋಮಿಯೋಪತಿ ಚಿಕಿತ್ಸಾ ಕೇಂದ್ರವೊಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾನ್ಯೂನ್ಯತೆ ಸಂಬಂಧ ಪೂರ್ಣ ಹಣ ಪಾವತಿಸುವವರೆಗೆ 40 ಸಾವಿರ ರೂ.ಗೆ ಶೇ.9ರ ಬಡ್ಡಿ ಸೇರಿಸಿ ನೀಡುವಂತೆ ಆದೇಶಿಸಿದೆ.
ಕ್ರಾನಿಕ್ ಪ್ಯಾಕ್ರಿಯಾಟೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಶಿವಮೊಗ್ಗ ವಿನೋಬನಗರದ ವ್ಯಕ್ತಿ ದೂರು ನೀಡಿದವರು. ಅವರು ದಾವಣಗೆರೆಯ ಹೋಮಿಯೋಪತಿ ಚಿಕಿತ್ಸಾ ಕೇಂದ್ರವನ್ನು ಸಂಪರ್ಕಿಸಿದಾಗ 40 ಸಾವಿರ ರೂ.ಗೆ ಮೂರು ವರ್ಷ ಚಿಕಿತ್ಸೆ ಮತ್ತು ಔಷಧ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ರೋಗಿಯು 2024ರ ಮಾ.29ರಂದು ಮತ್ತು ಏ.1ರಂದು 40 ಸಾವಿರ ರೂ. ಪಾವತಿಸಿದ್ದರು.
ಅನೇಕ ಬಾರಿ ಮನವಿ ಮಾಡಿದರೂ ರೋಗಿಗೆ ಚಿಕಿತ್ಸೆ ಮತ್ತು ಔಷಧ ನೀಡಿರಲಿಲ್ಲ. ಇದರಿಂದ ನೊಂದ ರೋಗಿಯು ಶಿವಮೊಗ್ಗದ ರಾಜಕುಮಾರ್ ಡಯಾಗ್ನೋಸ್ಟಿಕ್ ಚಿಕಿತ್ಸಾ ಕೇಂದ್ರದಲ್ಲಿ 50 ಸಾವಿರ ರೂ. ಖರ್ಚು ಮಾಡಿ ಚಿಕಿತ್ಸೆ ಪಡೆಯುವಂತಾಗಿದೆ. ಹಾಗಾಗಿ 40 ಸಾವಿರ ರೂ. ಪಡೆದು ಚಿಕಿತ್ಸೆ ಮತ್ತು ಔಷಧ ನೀಡದ ಹೋಮಿಯೋಪತಿ ಚಿಕಿತ್ಸಾ ಕೇಂದ್ರದ ವಿರುದ್ಧ ಜಿಲ್ಲಾ ಆಯೋಗಕ್ಕೆ ರೋಗಿಯು ದೂರು ನೀಡಿದ್ದರು.
ರೋಗಿ ಮತ್ತು ಎದುರುದಾರರ ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ, ರೋಗಿಯ ದೂರನ್ನು ಪುರಸ್ಕರಿಸಿ ಪರಿಹಾರಕ್ಕೆ ಆದೇಶಿಸಿದೆ. ಅಲ್ಲದೆ, ಮಾನಸಿಕ ಹಿಂಸೆಗೆ 8 ಸಾವಿರ ರೂ. ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ 5 ಸಾವಿರ ರೂ. ಅನ್ನು ಆದೇಶವಾದ 45 ದಿನದೊಳಗೆ ಪಾವತಿಸಬೇಕು. ತಪ್ಪಿದಲ್ಲಿ ಶೇ.12ರ ಬಡ್ಡಿ ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ತೀರ್ಪು ನೀಡಿದೆ.