ಶಿವಮೊಗ್ಗ: ರೆಫ್ರಿಜರೇಟರ್ ದುರಸ್ತಿ ಮಾಡಿಕೊಡದೆ ಸೇವಾನ್ಯೂನ್ಯತೆ ಎಸಗಿದ ಕಾರಣಕ್ಕೆ ಗ್ರಾಹಕನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಗಳ ಆಯೋಗವು ಮಾರಾಟ ಸಂಸ್ಥೆಗೆ ಆದೇಶಿಸಿದೆ.
ಗ್ರಾಹಕ ಎಸ್.ವಿ.ಲೋಹಿತಾಶ್ವ ಅವರು ಶಿವಮೊಗ್ಗದ ಮಾರಾಟ ಮಳಿಗೆಯೊಂದರಿಂದ ರೆಫ್ರಿಜರೇಟರ್ ಖರೀದಿಸಿದ್ದರು. ಈ ವೇಳೆ 2 ವರ್ಷಗಳ ವಾರಂಟಿ ನೀಡಲಾಗಿತ್ತು. ಆ ರೆಫ್ರಿಜರೇಟರ್ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಹಾಗೂ ಕೂಲ್ ಆಗುತ್ತಿಲ್ಲವೆಂದು ಗ್ರಾಹಕ ಲೋಹಿತಾಶ್ವ ಮಾರಾಟ ಮಳಿಗೆ ಗಮನಕ್ಕೆ ತಂದಿದ್ದರು. 2 ವರ್ಷಗಳ ವಾರಂಟಿ ಅವಧಿಯೊಳಗಿದ್ದ ಕಾರಣದಿಂದ ದುರಸ್ತಿ ಮಾಡಿಕೊಡುವಂತೆ ಕೋರಿದ್ದರು.
ಆದರೆ ಮಾರಾಟ ಸಂಸ್ಥೆಯವರು ರೆಫ್ರಿಜರೇಟರ್ ದುರಸ್ತಿ ಮಾಡಿಕೊಡದೆ ಸೇವಾನ್ಯೂನ್ಯತೆ ಎಸಗಿದ್ದಾರೆಂದು ಆರೋಪಿಸಿ ಲೋಹಿತಾಶ್ವ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು.
ಆಯೋಗದ ನೋಟಿಸ್ ಹೊರತಾಗಿಯೂ ವಿಚಾರಣೆ ವೇಳೆ ಮಾರಾಟ ಸಂಸ್ಥೆಯವರು ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗವು ದೂರುದಾರರು ಸಲ್ಲಿಸಿದ ಪ್ರಮಾಣಪತ್ರ, ದಾಖಲೆ ಹಾಗೂ ವಕೀಲರ ವಾದ ಆಲಿಸಿ ಸೇವಾನ್ಯೂನ್ಯತೆಯಾಗಿರುವುದನ್ನು ಪರಿಗಣಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಆದೇಶ ಹೊರಡಿಸಿದ 45 ದಿನದೊಳಗೆ ರಿಫ್ರಿಜರೇಟರ್ ರಿಪೇರಿ ಮಾಡಿಕೊಡಬೇಕು. ಒಂದು ವೇಳೆ ರಿಪೇರಿ ಮಾಡಿಕೊಡಲು ಸಾಧ್ಯವಾಗದಿದ್ದಲ್ಲಿ, ರೆಫ್ರಿಜರೇಟರ್ ಅನ್ನು ಒಂದೂವರೆ ವರ್ಷ ಉಪಯೋಗಿಸಿರುವುದರಿಂದ ಖರೀದಿ ಬೆಲೆಗೆ ಶೇ.10ರಷ್ಟು ಸವಕಳಿ ಹಾಗೂ ಜಿಎಸ್‌ಟಿ ಕಳೆದು 27,312 ರೂ. ಅನ್ನು ರೆಫ್ರಿಜರೇಟರ್ ಹಿಂಪಡೆದು ದೂರುದಾರರಿಗೆ ನೀಡಬೇಕು. 5 ಸಾವಿರ ರೂ. ಅನ್ನು ಮಾನಸಿಕ ಹಿಂಸೆ ಹಾಗೂ 10 ಸಾವಿರ ರೂ. ಅನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಪೀಠವು ಆದೇಶ ಹೊರಡಿಸಿದೆ.