ಲಿಂಗಸುಗೂರು: ಸ್ಥಳೀಯ ಪುರಸಭೆ ವಾಣಿಜ್ಯ ಮಳೆಗೆಗಳ ಟೆಂಡರ್ ಪ್ರಕ್ರಿಯೆ ಆರಂಭಿಸುವ ಜತೆಗೆ ನಾನಾ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಪುರಸಭೆ ಕಂದಾಯ ನಿರೀಕ್ಷಕ ಅಶೋಕ ಅಲ್ಲಾಪುರಗೆ ಬುಧವಾರ ಮನವಿ ಸಲ್ಲಿಸಿದರು.
ಪುರಸಭೆ ವ್ಯಾಪ್ತಿಯ 50 ವಾಣಿಜ್ಯ ಮಳಿಗೆಗಳನ್ನು ಹಲವು ವರ್ಷಗಳಿಂದ ಟೆಂಡರ್ ಕರೆಯದ ಕಾರಣ ಪುರಸಭೆಗೆ ಕಡಿಮೆ ಆದಾಯ ಬರುತ್ತಿದೆ. ಅನೇಕ ವರ್ಷಗಳಿಂದ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿವೆ. ಕೂಡಲೇ ಟೆಂಡರ್ ಕರೆದು ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕು.
ಪಟ್ಟಣದ ಶನಿವಾರ ಸಂತೆಗೆ ನೂರಾರು ಜನ ವ್ಯಾಪಾರ ವಹಿವಾಟಿಗೆ ಆಗಮಿಸುತ್ತಾರೆ. ಆದರೆ ಸಂತೆಯಲ್ಲಿ ಮೂಲ ಸೌಕರ್ಯವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂತೆಯ ಪ್ರದೇಶ ಶುಚಿತ್ವ ಕಾಪಾಡುವ ಜತೆಗೆ ಕುಡಿಯುವ ನೀರು ಸೇರಿ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು. 10ನೇ ವಾರ್ಡ್‌ನಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ಚರಂಡಿ ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದರು.