ಜಿಲ್ಲೆ

ಹರಿಹರದಲ್ಲಿ ವಾಣಿಜ್ಯ ಮಳಿಗೆಗಳ ಮರು ಹರಾಜಿಗೆ ಪಟ್ಟು

ಹರ್ಷ ನ.ಪುರೋಹಿತ

ಹರಿಹರ: ತಾಲೂಕು ಕ್ರೀಡಾಂಗಣದ ವಾಣಿಜ್ಯ ಮಳಿಗೆಗಳ ಬಾಡಿಗೆ ಅವಧಿ ಮುಗಿದಿದ್ದು, ಕೂಡಲೇ ಮರು ಹರಾಜು ಮಾಡುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಶನಿವಾರದಿಂದ ಗಾಂಧಿ ವೃತ್ತದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಸಂಘಟನೆಯ ತಾಲೂಕು ಅಧ್ಯಕ್ಷ ಎಸ್.ಗೋವಿಂದ ಮಾತನಾಡಿ, ತಾಲೂಕು ಕ್ರೀಡಾಂಗಣದಲ್ಲಿ ನೆಲ ಮತ್ತು ಮೊದಲೆಯ ಮಹಡಿಯ 42 ವಾಣಿಜ್ಯ ಮಳಿಗೆಗಳು ಬಾಡಿಗೆ ಅವಧಿ ಮುಗಿದರೂ ವರ್ಷಗಳೇ ಕಳೆದಿದೆ. ಆದರೂ ಇಲಾಖೆಯವರು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯವಾಗಿ ನಮ್ಮ ಸಂಘಟನೆಯೂ ಸೇರಿದಂತೆ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಜನಪ್ರತಿನಿಧಿ ಹಾಗೂ ಕ್ರೀಡಾ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿವೆ. ಇದರ ಪರಿಣಾಮವಾಗಿ ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು 2024ರ ಸೆ. 27ರಂದು ಹರಾಜು ಪ್ರಕಟಣೆ ಹೊರಡಿಸಿತ್ತು.

ಆದರೆ, ಕಳೆದ ವರ್ಷ ಇಲಾಖೆಯಿಂದ ಮಳಿಗೆ ಹರಾಜು ಮಾಡುತ್ತೇವೆಂದು ಸಾರ್ವಜನಿಕರರಿಂದ 500 ರೂ. ಶುಲ್ಕ ನಿಗದಿಪಡಿಸಿ 180 ಅರ್ಜಿಗಳನ್ನು ವಿತರಿಸಿತ್ತು. ಆದರೆ, ಹರಾಜು ಪ್ರಕ್ರಿಯ ನಡೆಸಿರುವುದಿಲ್ಲ. ಈಗ ಮತ್ತೆ ಅರ್ಜಿ ಪಡೆಯುವಂತೆ ಪ್ರಕಟಣೆ ನೀಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದರು.

ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸದೆ ಹೇಗೆ ಹರಾಜು ಪ್ರಕ್ರಿಯೆ ನಡೆಸುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಜಿಲ್ಲಾ ಕ್ರಿಡಾಂಗಣ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನಿಯಮದಂತೆ ಹರಾಜು ಪ್ರಕ್ರಿಯೆ ನಡೆಸುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

ಸಂಘಟನೆಯ ಉಪಾಧ್ಯಕ್ಷ ಎಂ.ಆರ್.ಆನಂದ್, ಪ್ರಧಾನ ಕಾರ್ಯದರ್ಶಿ ಸಿ.ಎಚ್ ಸುನಿಲ್‌ಕುಮಾರ್, ಸಹ ಕಾರ್ಯದರ್ಶಿ ಭರತ್ ಭಾನುವಳ್ಳಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಧು, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಘಟಕದ ಅಧ್ಯಕ್ಷ ಅಪ್ಪು ಭಾನುವಳ್ಳಿ, ರುದ್ರಗೌಡರು, ನಿಜಗುಣಪ್ಪ, ಕೊಟ್ರಪ್ಪ, ಕಿರಣ್, ಪ್ರದೀಪ್, ಗಿರೀಶ್, ಬಸವರಾಜ್ ಇತರರಿದ್ದರು.