ವಿಜಯಪುರ: ಪಟ್ಟಣದ ಮೇಲೂರು ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ನಾಗರಕೆರೆ ಅಭಿವೃದ್ಧಿಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಕೈಗೊಳ್ಳಲಾಗಿದೆ.
ನಮ್ಮ ಪೂರ್ವಜರು ನಿಸ್ವಾರ್ಥದಿಂದ ಪಟ್ಟಣದ ನಾಲ್ಕೂ ಭಾಗಗಳಲ್ಲಿ ಕಲ್ಯಾಣಿ ಹಾಗೂ ಕೆರೆ-ಕುಂಟೆ ನಿರ್ಮಿಸಿದ್ದು, ಅವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಕೆಲವರು ನಾಗರಕೆರೆ ಅಭಿವೃದ್ಧಿ ಸಮಿತಿ ರಚಿಸಿ ಕೆರೆ ಪುನಶ್ಚೇತನಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ನೀಲಿನಕ್ಷೆ ಹಾಗೂ ಅಂದಾಜು ಪಟ್ಟಿ ತಯಾರಿಸಿದ್ದು, ಶಾಸಕರ ನಿಧಿಯಿಂದ 5 ಲಕ್ಷ ರೂ., ಧರ್ಮಸ್ಥಳ ಕ್ಷೇತ್ರಾಭಿವೃದ್ಧಿ ಸಮಿತಿಯಿಂದ 3 ಲಕ್ಷ ರೂ. ಹಾಗೂ ಸಮಾನ ಮನಸ್ಕರ ಸಹಾಯದಿಂದ ಹಣ ಸಂಗ್ರಹಿಸಿ ಅಭಿವೃದ್ಧಿ ಕಾರ್ಯವನ್ನು ಬಿರುಸಿನಿಂದ ಕೈಗೊಂಡಿದ್ದಾರೆ.
ನೀಲಿ ನಕ್ಷೆ ಪ್ರಕಾರ ಅಭಿವೃದ್ಧಿ ಕಾರ್ಯಕ್ಕೆ 95 ಲಕ್ಷ ರೂ. ಯೋಜನೆ ಸಿದ್ಧವಾಗಿದೆ. ರಸ್ತೆ, ತಡೆಗೋಡೆ, ಉದ್ಯಾನವನ, ಸಾರ್ವಜನಿಕರ ವಾಕಿಂಗ್ ಪಾತ್, ಶೌಚಗೃಹ, ಶೆಲ್ಟರ್ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ ರೂಪಿಸಿದ್ದು, ತುರ್ತಾಗಿ ಮಳೆಗಾಲ ಪ್ರಾರಂಭವಾಗುವ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಸಮಿತಿ ಮುಂದಾಗಿದೆ.
ದಾನಿಗಳಾದ ಅಂಕತಟ್ಟಿ ನಂಜುಂಡಪ್ಪ ಅವರು ಪಟ್ಟಣದ ಈಶಾನ್ಯ ಭಾಗದಲ್ಲಿ ಸದಾ ಕಾಲ ನೀರಿದ್ದರೆ, ಪಟ್ಟಣ ಸಮೃದ್ಧವಾಗಿರುತ್ತದೆ ಎಂಬ ಉದ್ದೇಶದಿಂದ ಒಂದೂವರೆ ಎಕರೆ ಜಮೀನಿನಲ್ಲಿ ನಾಗರಕೆರೆ, ಅಶ್ವತ್ಥಕಟ್ಟೆ, ಪೂಜಾ ಗೃಹ ನಿರ್ಮಿಸಿದ್ದರು. ಅವು ಈಗ ಹಾಳಾಗಿದ್ದು, ಸಮಿತಿಯಿಂದ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ನೂರಾರು ಟ್ರ್ಯಾಕ್ಟರ್ ಹೂಳು ಎತ್ತಲಾಗಿದೆ. ಕಸ, ಕಡ್ಡಿ, ಮಣ್ಣು, ಕಲ್ಲು ತೆಗೆಸಿ ಸುತ್ತಲೂ ಕಲ್ಲಿನ ಕಟ್ಟಡ ನಿರ್ಮಿಸಲಾಗುತ್ತಿದ್ದು, ದಾನಿಗಳು ಸಹಾಯ ಹಸ್ತ ನೀಡಿದರೆ, ಪಟ್ಟಣ ಸ್ಮರಣೀಯ ಸ್ಥಳವಾಗಲಿದೆ ಎಂದು ಮಹಂತಿನ ಮಠದ ಕಾರ್ಯದರ್ಶಿ ವಿ.ವಿಶ್ವನಾಥ್ ತಿಳಿಸಿದ್ದಾರೆ.
ವಿವರಗಳಿಗಾಗಿ ನಾಗರಕೆರೆ ಅಭಿವೃದ್ಧಿ ಸಮಿತಿ ಮೊ: 9845747768, 9886818860, 9986077569 ಸಂಪರ್ಕಿಸಿ.
2 ತಿಂಗಳಿನಿಂದ ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಾರ್ಯವನ್ನು ಮತ್ತೆ ಪ್ರಾರಂಭಿಸಲಾಗಿದೆ. ಕೆರೆ ಪುನಶ್ಚೇತನಕ್ಕೆ ರಾಜ್ಯದ ಸಂಘ-ಸಂಸ್ಥೆಗಳು ಸಹಾಯ ಹಸ್ತ ನೀಡಬೇಕು. ವಿ.ಶಿವಕುಮಾರ್ ನಾಗರಕೆರೆ ಅಭಿವೃದ್ಧಿ ಸಮಿತಿ ಸಂಚಾಲಕ