ಶೃಂಗೇರಿ: ಪ್ರಸ್ತುತ ತಾಲೂಕಿನಲ್ಲಿ ಜಂಟಿ ಸರ್ವೇ ಪ್ರಾರಂಭಗೊಂಡಿದ್ದು, ಇದರಿಂದ ಈ ಭಾಗದ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಸಿಗುವ ಭರವಸೆ ಇದೆ ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಹೇಳಿದರು.
ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ಗೆ ಮನವಿಸಲ್ಲಿಸಿ ಮಾತನಾಡಿ, ಇದುವರೆಗೂ ಯಾವುದೇ ಜಿಲ್ಲಾಧಿಕಾರಿಗಳು ಇಂತಹ ಕ್ರಮ ತೆಗೆದುಕೊಳ್ಳದ ಕಾರಣದ ಇಲ್ಲಿನ ಜಲ್ವಂತ ಸಮಸ್ಯೆ ಹಾಗೆಯೇ ಉಳಿದಿದೆ. ಆದರೆ ಹಾಲಿ ಜಿಲ್ಲಾಧಿಕಾರಿಗಳ ನಿರ್ಧಾರದಿಂದ ಡಿಸಿ ಪ್ರಸ್ತಾವಿತ ಜಾಗವನ್ನು ಕಂದಾಯ ಇಲಾಖೆ ಹಿಂದಕ್ಕೆ ಪಡೆಯಲು ಸಹಕಾರಿಯಾಗಲಿದೆ ಎಂದರು.
ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ್ ಕಚ್ಚೊಡಿ ಮಾತನಾಡಿ, ಜಂಟಿ ಸರ್ವೇ ನಡೆಸುವಾಗ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕು.ಅಲ್ಲಿ ಇರುವ ರೈತರ ಒತ್ತುವರಿ, ವಾಸದ ಮನೆ, ಸರ್ಕಾರಿ ರಸ್ತೆ, ಕುಡಿಯುವ ನೀರಿನ ಯೋಜನೆ, ನಿವೇಶನ ಮಂಜೂರು ಮಾಡಲು ಬೇಕಾಗಿರುವ ಜಾಗ ಹೀಗೆ ಎಲ್ಲ ಮಾಹಿತಿಗಳೊಂದಿಗೆ ಸರ್ವೇ ಸ್ಥಳಕ್ಕೆ ಅಧಿಕಾರಿಗಳು ತೆರಳಬೇಕು. ಈ ಸಂದರ್ಭದಲ್ಲಿ ಅರಣ್ಯ ವ್ಯವಸ್ಥಾಪನ ಅಧಿಕಾರಿ ಅಥವಾ ಅವರ ಪ್ರತಿನಿಧಿ ಜತೆಯಲ್ಲಿ ಇರಬೇಕು. ಡಿಸಿ ಪ್ರಸ್ತಾವಿತ ಜಾಗವನ್ನು ಅಳತೆ ಮಾಡಿ ಅಗತ್ಯ ಕ್ರಮ ವಹಿಸಲು ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಜಂಟಿ ಸರ್ವೇ ನಡೆದ ನಂತರ ಅಧಿಕಾರಿಗಳು ನೀಡಿದ ಮಾಹಿತಿ ಪರಿಶೀಲನೆ ಮಾಡಿ ಮುಂದಿನ ಪ್ರಕ್ರಿಯೆ ಕುರಿತು ನಿರ್ಧಾರ ಮಾಡಲಾಗುವುದು ಎಂದರು.
ಪ್ರಧಾನ ಕಾರ್ಯದರ್ಶಿ ರಮೇಶ್ ಕಚ್ಚೊಡಿ, ಪದಾಧಿಕಾರಿ ದಿನೇಶ್ ಅಂಗುರ್ಡಿ, ಶ್ರೀನಿವಾಸ್ ನಾಯ್ಕ, ನಾಗೇಂದ್ರ ಕಚಿಗೆ ಇದ್ದರು.