ಕುಶಾಲನಗರ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಸಮೀಪದ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ 5.20 ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣಕ್ಕೆ ಗುರುವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ಚಾಲನೆ ನೀಡಿದರು.
ಕೇಂದ್ರ ಸರ್ಕಾರವು ಬಯಲು ಶೌಚವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಸ್ವಚ್ಛ ಭಾರತ್ ಮಿಷನ್ ಜಾರಿಗೆ ತರುವ ಮೂಲಕ ಶೌಚಗೃಹ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿದೆ. ಮಕ್ಕಳು ಶೌಹಗೃಹವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಸರ್ಕಾರ ಮಕ್ಕಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಅಂತೆಯೇ ಈ ಶಾಲೆಯಲ್ಲಿ ಗುಣಮಟ್ಟದ ಕಲಿಕಾ ಪ್ರಗತಿ ಇದೆ. ಈ ಶಾಲೆಗೆ ಮುಂದಿನ ದಿನಗಳಲ್ಲಿ ಸುಸಜ್ಜಿತ ಉದ್ಯಾನ ನಿರ್ಮಾಣ ಮಾಡುವ ಮೂಲಕ ಶಾಲೆಯನ್ನು ಆಕರ್ಷಣೀಯವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಳ್ಳಿಗಳಲ್ಲಿ ಆರೋಗ್ಯ ಮತ್ತು ನೆರ್ಮಲ್ಯ ಕಾಪಾಡುವ ದಿಸೆಯಲ್ಲಿ ಬಯಲು ಶೌಚಗೃಹಕ್ಕೆ ವಿದ್ಯಾರ್ಥಿಗಳು ನಾಂದಿ ಹಾಡಬೇಕು. ಶೌಚಗೃಹ ರಹಿತ ಕುಟುಂಬಗಳನ್ನು ಗುರುತಿಸಿ ಅಂತಹವರಿಗೆ ಶೌಚಗೃಹ ನಿರ್ಮಿಸಲು ನೆರವಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ.ಭೋಗಪ್ಪ ಮಾತನಾಡಿ, ಶೌಚಗೃಹ ನಿರ್ಮಾಣದಿಂದ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಮಕ್ಕಳು ಸರ್ಕಾರಿ ಸೌಲಭ್ಯ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಸಹಕಾರದಿಂದ ಶೌಚಗೃಹ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ವೈಯ್ಯಕ್ತಿಕ ಸ್ವಚ್ಛತೆ ಹಾಗೂ ನೆರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಗ್ರಾ.ಪಂ.ಉಪಾಧ್ಯಕ್ಷೆ ಶಶಿಕಲಾ, ಎಸ್.ಡಿ.ಎಂ.ಸಿ. ಅಧ್ಯಕ್ಷ ಎ.ಎಂ.ಜವರಯ್ಯ, ಪಿಡಿಒ ಎಂ.ಆರ್.ಸಂತೋಷ್, ಕಚೇರಿ ಸಿಬ್ಬಂದಿ ಅವಿನಾಶ್, ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್.ಸುಜಾತಾ, ಬಿ.ಡಿ.ರಮ್ಯಾ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ, ಸಿಬ್ಬಂದಿ ಎಂ.ಉಷಾ ಇತರರಿದ್ದರು.