ಜಿಲ್ಲೆ

ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭ

ಆದರ್ಶ್. ಎಂ.ಕೆ.

ಮಡಿಕೇರಿ: ಮೈಸೂರಿನ ಆಚಾರ್ಯ ಐಐಟಿ ವಿದ್ಯಾಸಂಸ್ಥೆಯಲ್ಲಿ ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ ಎಂದು ಪ್ರಾಂಶುಪಾಲ ಸುಧೀರ್ ಆಚಾರ್ಯ ತಿಳಿಸಿದ್ದಾರೆ.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಆಚಾರ್ಯ ಐಐಟಿ ಉತ್ತಮ ಅವಕಾಶ ಕಲ್ಪಿಸಿದೆ. ಡಿಜಿಟಲ್ ಆರ್ಕಿಟೆಕ್ಚರ್ ಆರಂಭವಾಗಿ ೨ ವರ್ಷಗಳಾಗಿದೆ. ಈ ಬಾರಿ ಹೊಸದಾಗಿ ವೈದಿಕ್ ಆರ್ಕಿಟೆಕ್ಚರ್, ಸೈಬರ್ ಸೆಕ್ಯೂರಿಟಿ ಮತ್ತು ಡೇಟಾ ಸೈನ್ಸ್, ಆರ್ಟಿಫಿಷಿಯಲ್ ಮತ್ತು ಮೆಷಿನ್ ಲರ್ನಿಂಗ್ ಕೋರ್ಸ್‌ಗಳು ಆರಂಭವಾಗಿದೆ. ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರವೇಶಾತಿ ಆರಂಭಗೊಂಡಿದ್ದು, ಆ.೧೫ ಕಡೆ ದಿನ ಎಂದು ತಿಳಿಸಿದರು.


ವಿದ್ಯಾರ್ಥಿಗಳು ಆರ್ಕಿಟೆಕ್ಚರ್ ಸಂಬಂಧಿತ ಕೋರ್ಸ್‌ಗಳಿಗೆ ರಾಷ್ಟ್ರಮಟ್ಟದ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಬದಲಾಗಿ ಸಂಸ್ಥೆಯು ತನ್ನದೇ ಆದ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಈ ವಿಧಾನವು ಮಕ್ಕಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಆಚಾರ್ಯ ಐಐಟಿ ಅಂತರಾಷ್ಟ್ರೀಯ ಸಹಯೋಗ ಹೊಂದಿದ್ದು, ಇದು ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮುಂದುವರಿಸಲು ಅನುಕೂಲವಾಗಲಿದೆ ಎಂದರು.


ರಾಷ್ಟ್ರೀಯ ಶಿಕ್ಷಣ ನೀತಿಯಡಿ ಹೊಸ ಪಠ್ಯಕ್ರಮ, ಮೊದಲ ೧೫ ವಿದ್ಯಾರ್ಥಿಗಳಿಗೆ ಶೇ.೫೦ ವಿದ್ಯಾರ್ಥಿ ವೇತನ, ಉದ್ಯೋಗ ಖಾತರಿ, ಶುಲ್ಕ ಪಾವತಿಗೆ ಇಎಂಐ ನಿಬಂಧನೆ ಮತ್ತು ಪ್ರವೇಶ ಪ್ರಕ್ರಿಯೆ ಸರಳಗೊಳಿಸುವ ಡಿಜಿಟಲ್ ಪ್ರವೇಶ ಪ್ರಕ್ರಿಯೆಯನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯ ದೇವಾನಂದ್, ಪ್ರೊಫೆಸರ್ ಸಾಯಿಕಿರಣ್ ಹಾಜರಿದ್ದರು.