ಮೈಸೂರು: ಕರೊನಾ ಕ್ಷೀಪ್ರಗತಿಯಲ್ಲಿ ಹರಡುತ್ತಿರುವ ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಮೊದಲ ಖಾಸಗಿ ಕೋವಿಡ್ ಆರೈಕೆ ಕೇಂದ್ರ ಗುರುವಾರ ಕಾರ್ಯಾರಂಭ ಮಾಡಿದೆ.
ಉದಯಗಿರಿಯ ಾರೂಕಿಯಾ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಇಲ್ಲಿಗೆ ಅಜೀಜ್‌ಸೇಠ್‌ನಗರದ ಮಜ್ದೂರ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಕರ್ತವ್ಯನಿರ್ವಹಣೆಗೆ ನಿಯೋಜಿಸಲಾಗಿದೆ. ಈ ಕೇಂದ್ರದಲ್ಲಿ ಸದ್ಯಕ್ಕೆ 140 ಹಾಸಿಗೆ ವ್ಯವಸ್ಥೆ ಇದೆ.
ಜಿಲ್ಲಾಡಳಿತದೊಂದಿಗೆ ಮೈಸೂರು ಮಹಾನಗರ ಪಾಲಿಕೆ, ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರು, ಮೌಲ್ವಿಗಳು, ವಿವಿಧ ಇಲಾಖೆಗಳು, ಉದ್ಯಮಿಗಳು, ಸಂಘ- ಸಂಸ್ಥೆಗಳು ಇನ್ನಿತರ ಸೇವಾ ಮನಸ್ಕರೆಲ್ಲ ಸೇರಿ ಈ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎನ್.ಆರ್.ಕ್ಷೇತ್ರದಲ್ಲಿ ಕೋವಿಡ್ ಪ್ರಕರಣಗಳು ತ್ವರಿತವಾಗಿ ಏರಿಕೆಯಾಗುತ್ತಿದ್ದು, ಇಲ್ಲಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅವರ ಭಯ ನಿವಾರಣೆಗೆ ಇಲ್ಲಿಯೇ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದೆ. ಕ್ಷೇತ್ರದಲ್ಲಿ ಮನೆ ಮನೆ ಸಮೀಕ್ಷೆ ಮಾಡಲಾಗುತ್ತಿದೆ. ಈ ವೇಳೆ ಪತ್ತೆಯಾಗುವ ಸೋಂಕಿತರನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗುವುದು. ರೋಗಲಕ್ಷಣವಿಲ್ಲದ ರೋಗಿಗಳು ಮಾತ್ರ ಇಲ್ಲಿ ಇರಲಿದ್ದು, ಗಂಭೀರ ಪರಿಸ್ಥಿತಿ ಇರುವ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ’ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.
ಇದು ಎಲ್ಲರ ಸಹಭಾಗಿತ್ವದಿಂದ ಆರಂಭವಾಗಿರುವ ಕೇಂದ್ರವಾಗಿದ್ದು, ನೀರು, ಆಹಾರ, ಹಾಸಿಗೆ, ದಿಂಬು, ವೈದ್ಯಕೀಯ ಸಲಕರಣೆ ಸೇರಿ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ, ಪಾಲಿಕೆ, ಮೌಲ್ವಿಗಳು, ಸ್ಥಳೀಯ ಮುಖಂಡರು ಹಾಗೂ ಸಂಘ- ಸಂಸ್ಥೆ ಸದಸ್ಯರು ಹಾಗೂ ದಾನಿಗಳ ನೀಡಿದ್ದಾರೆ. ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಆಕ್ಸಿಜನ್ ಸಿಲಿಂಡರ್ ಅನ್ನು ದಾನವಾಗಿ ನೀಡಿದ್ದಾರೆ’ ಎಂದು ಎಂದು ಪಾಲಿಕೆ ಸದಸ್ಯ ಆಯೂಬ್ ಖಾನ್ ತಿಳಿಸಿದರು.
ಎನ್‌ಆರ್ ಕ್ಷೇತ್ರದಲ್ಲಿ ಮೂರು ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗುವುದು. ಫಾರೂಕಿಯಾ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಸೇರಿ ರಾಜೀವ್‌ನಗರದ ಆಂಡುಲೆನ್ಸ್ ಪಬ್ಲಿಕ್ ಶಾಲೆ ಮತ್ತು ಅಜೀಜ್‌ಸೇಠ್ ನಗರದ ಬೀಡಿ ಕಾರ್ಮಿಕರ ಮಜ್ದೂರ್ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಅಂದಾಜು 450 ಹಾಸಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.