ಚಿಕ್ಕಬಳ್ಳಾಪುರ: ಪ್ರಸಕ್ತ ಸಾಲಿನಲ್ಲಿ ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳಲ್ಲಿ ತರಗತಿಗಳನ್ನು ಸಾಂಪ್ರದಾಯಿಕ, ಶೈಕ್ಷಣಿಕ ವಿವಿಧ ಚಟುವಟಿಕೆಯೊಂದಿಗೆ ಶುಭ ಶುಕ್ರವಾರ ಪ್ರಾರಂಭಿಸಲಾಯಿತು.
ಪ್ರವೇಶದ್ವಾರಗಳಿಗೆ ತಳಿರು ತೋರಣಗಳಿಂದ ಸಿಂಗಾರ, ಪುಟ್ಟ ಮಕ್ಕಳಿಗೆ ಗುಲಾಬಿ ಹೂವು ನೀಡುವುದರ ಜತೆಗೆ ಆರತಿ ಬೆಳಗಿದ ಸ್ವಾಗತವು ಗಮನ ಸೆಳೆಯಿತು. ವಿದ್ಯಾರ್ಥಿಗಳಿಗೆ ಸವಿರುಚಿಯ ಸಿಹಿಯೂಟದ ಉಣ ಬಡಿಸುವಿಕೆಯು ಶೈಕ್ಷಣಿಕ ಹಬ್ಬದ ಸಂಭ್ರಮದ ವಾತಾವರಣಕ್ಕೆ ಸಾಕ್ಷಿಯಾಯಿತು. ಒಲವಿನ ಮಾತುಗಳ ಸಂವಾದ, ಕಲಿಕೋಪಕರಣಗಳ ವಿತರಣೆ, ಶಾಲಾ ವ್ಯಾಪ್ತಿಯಲ್ಲಿ ಜಾಥಾ ಸೇರಿದಂತೆ ವಿವಿಧ ಚಟುವಟಿಕೆಯನ್ನು ಪೈಪೋಟಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಲಾಯಿತು.
ಏಪ್ರಿಲ್‌ನಲ್ಲಿ ಪರೀಕ್ಷೆ ಮುಗಿದ ಬಳಿಕ ಸುದೀರ್ಘ ರಜೆ ಮಜಾ ಅನುಭವಿಸಿದ ವಿದ್ಯಾರ್ಥಿಗಳು ಮೊದಲ ದಿನ ಶಾಲೆಗೆ ಖುಷಿಯಿಂದಲೇ ಆಗಮಿಸಿದರು. ಜಿಲ್ಲೆಯಲ್ಲಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರ ತರಗತಿಗಳ ಪ್ರಾರಂಭದ ಸಂಭ್ರಮೋತ್ಸವ ಆಕಷರ್ಣೀಯವಾಗಿತ್ತು. ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಶಾಲೆಯನ್ನು ತಳಿರು ತೋರಣಗಳು, ಬಲೂನ್‌ಗಳಿಂದ ಸಿಂಗರಿಸಿದ್ದರು. ಕುಶಲೋಪಚಾರದೊಂದಿಗೆ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸöಗಳನ್ನು ವಿತರಿಸಲಾಯಿತು. ಮೊದಲ ದಿನದ ಸಂಭ್ರಮೋತ್ಸವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕೇಸರಿಬಾತ್, ಉಪ್ಪಿಟ್ಟು, ಶಾವಿಗೆ ಪಾಯಸ ಸೇರಿದಂತೆ ಸಿಹಿಯೂಟವನ್ನು ಬಡಿಸಲಾಯಿತು. ಮಕ್ಕಳೊಂದಿಗೆ ಕುಳಿತು ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಬಿಸಿಯೂಟ ಸವಿದರು. ಮೊದಲ ದಿನ ಶಾಲೆಯಲ್ಲಿನ ಶೇ.70 ಹಾಜರಾತಿ ಕಂಡು ಬಂದಿದೆ.
*ಸಂಭ್ರಮದಲ್ಲಿ ಭಾಗಿ
ವಾರ್ಷಿಕ ಕ್ರಿಯಾ ಯೋಜನೆಯಂತೆ ಬುಧವಾರ ಮತ್ತು ಗುರುವಾರ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯದೊಂದಿಗೆ ತರಗತಿಗಳ ನಿರ್ವಹಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು. ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ಶಾಲಾ ಸಂಭ್ರಮೋತ್ಸವದಲ್ಲಿ ಭಾಗಿಯಾದರು. ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ದಾಖಲಾತಿ, ಕ್ರಿಯಾ ಯೋಜನೆ, ಶಾಲಾ ಪಂಚಾಂಗ, ಶುಚಿತ್ವ ಸಾಮಗ್ರಿಗಳು, ವರ್ಗಾವಣೆ ಪತ್ರಗಳ ತಯಾರು ಸೇರಿದಂತೆ ಹಲವು ದಾಖಲಾತಿಗಳನ್ನು ಪರಿಶೀಲಿಸಿದರು.
*ದಾಖಲಾತಿ ಆಂದೋಲನ
ಚಿಕ್ಕಬಳ್ಳಾಪುರ ತಾಲೂಕಿನ ನಂದಿ, ಅಂಗಟ್ಟ, ಗಾಂಧಿಪುರ, ಅಂಗಟ್ಟ, ಹಳೇ ಪೆರೇಸಂದ್ರ ಸೇರಿದಂತೆ ವಿವಿಧ ಶಾಲೆಯಲ್ಲಿ ದಾಖಲಾತಿ ಆಂದೋಲನ ಜಾಥಾವನ್ನು ಕೈಗೊಳ್ಳಲಾಯಿತು.
ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಕಲಿಕೋಪರಕಣಗಳ ವಿತರಣೆ ಸೇರಿದಂತೆ ನಾನಾ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಹಲವು ಕಡೆ ಆಂಗ್ಲ ಮಾಧ್ಯಮ ಬೋಧನಾ ವ್ಯವಸ್ಥೆಯು ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪಾಲಕರು ಮಕ್ಕಳನ್ನು ಚೆನ್ನಾಗಿ ಓದಿಸಿ, ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಸಿಆರ್‌ಪಿ ನಾರಾಯಣಸ್ವಾಮಿ ಸಲಹೆ ನೀಡಿದರು.