ಕೆ.ಎಂ.ದೊಡ್ಡಿ: ಸಮೀಪದ ಹನುಮಂತನಗರದಲ್ಲಿ ರೈತ ಹೋರಾಟಗಾರ, ಮಾಜಿ ಸಂಸದ, ಜಿ.ಮಾದೇಗೌಡ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಂತಿ ವನದಲ್ಲಿರುವ ಸ್ಮಾರಕದ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ, ಬಿಇಟಿ ಟ್ರಸ್ಟ್ ಚೇರ್ಮನ್ ಮಧು ಜಿ. ಮಾದೇಗೌಡ, ಮಿಮ್ಸ್ ಮಾಜಿ ನಿರ್ದೇಶಕ ಜಿ.ಎಂ. ಪ್ರಕಾಶ್, ಮೊಮ್ಮಗ ಆಶಯ್ ಮಧು, ಸೊಸೆ ಬಿಂದಿ ಮಧು ಮಾದೇಗೌಡ ಸೇರಿದಂತೆ ಕುಟುಂಬಸ್ಥರು ಪುಷ್ಪಾರ್ಚನೆ ನೆರವೇರಿಸಿ ಪೂಜೆ ಸಲ್ಲಿಸಿದರು.
ರಾಜಕೀಯ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಹಾಗೂ ಚಳವಳಿ ಸೇರಿದಂತೆ ವಿವಿಧ ರಂಗಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಗೌಡರು ಸರ್ವ ಜನಾಂಗಗಳ ಮನ್ನಣೆ ಗಳಿಸಿದ್ದರು. ಹಲವಾರು ಮುಖಂಡರು, ಅಭಿಮಾನಿಗಳು ಮತ್ತು ಭಾರತೀ ಎಜುಕೇಷನ್ ಟ್ರಸ್ಟ್‌ನ ಸಿಬ್ಬಂದಿ ಆಗಮಿಸಿ ಗೌಡರಿಗೆ ವಿಶೇಷ ನಮನ ಸಲ್ಲಿಸಿದರು.
ಪುಣ್ಯಸ್ಮರಣೆ ಅಂಗವಾಗಿ ಬೆಳಗ್ಗೆಯಿಂದ ಸಂಜೆವರೆವಿಗೂ ಸಾವಿರಾರು ಅಭಿಮಾನಿಗಳು ಆಗಮಿಸಿ ಗೌಡರ ಸ್ಮಾರಕಕ್ಕೆ ನಮಿಸಿದರು. ಪುಣ್ಯಸ್ಮರಣೆಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ನನ್ನ ತಂದೆಯ ಹೋರಾಟ, ಹೆಜ್ಜೆಗುರುತುಗಳು ನಮ್ಮಿಡೀ ಬದುಕಿಗೆ ಆದರ್ಶವಾಗಿದ್ದು ಕುಗ್ರಾಮದಲ್ಲಿ ಜನಿಸಿದ್ದರೂ ಹಂತ ಹಂತವಾಗಿ ಜನರ ಸಮಸ್ಯೆಗಳನ್ನು ಆಳುವ ಸರ್ಕಾರದ ಮುಂದಿಟ್ಟು ಜನಮನ್ನಣೆ ಗಳಿಸಿ ಶಾಸಕ, ಸಂಸದ, ಸಚಿವರಾಗಿ ಮಾಡಿರುವ ಸಾಧನೆಯೇ ನನ್ನ ಬದುಕಿನ ಪ್ರೇರಣೆಯಾಗಿದೆ ಎಂದು ಹೇಳಿದರು.
ಹಳ್ಳಿಗಾಡಿನ ಮಕ್ಕಳ ಭವಿಷ್ಯ ರೂಪಿಸಲು ಸ್ಥಾಪಿಸಿದ ಭಾರತೀ ಎಜುಕೇಷನ್ ಟ್ರಸ್ಟ್ ಅಗಾಧವಾಗಿ ಹೆಮ್ಮರವಾಗಿ ಬೆಳೆದಿದ್ದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಂಸ್ಥೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಿ ನಗರ ಪ್ರದೇಶಕ್ಕೆ ತೆರಳಿ ದುಬಾರಿ ಹಣ ನೀಡಿ ಶಿಕ್ಷಣ ಪಡೆಯುವ ಮಕ್ಕಳಿಗೆ ಕಡಿಮೆ ದರದಲ್ಲಿ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಹನುಮಂತನಗರದ ನೆಚ್ಚಿನ ತಾಣ ಶಾಂತಿ ವನದಲ್ಲಿ ಸ್ಮಾರಕ ನಿರ್ಮಿಸಿದ್ದು ಮುಂದಿನ ದಿನಗಳಲ್ಲಿ ಮ್ಯೂಸಿಯಂ ನಿರ್ಮಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದು ಅದಕ್ಕಾಗಿ ಗೌಡರು ಹೋರಾಟದ ಹಾದಿ ಸೇರಿದಂತೆ ಅವರ ಬದುಕಿನ ಚಿತ್ರಣ ಒಳಗೊಂಡ ಹಲವು ವಿಶೇಷತೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಭಾರತೀ ಎಜುಕೇಷನ್ ಟ್ರಸ್ಟ್‌ನ ಅಂಗ ಸಂಸ್ಥೆಯಾದ ಭಾರತೀ ವಸತಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಗೌಡರ ಸಮಾಧಿಗೆ ನಮಿಸಿದರು.
ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯಧ್ಯಕ್ಷ ಬಿ.ಬಸವರಾಜು, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಸಿಇಒ ಆಶಯ್‌ಮಧು, ಟ್ರಸ್ಟಿ ಕಾರಕಹಳ್ಳಿ ಬಸವೇಗೌಡ, ವಿವಿಧ ಅಂಗ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎಂ.ಎಸ್. ಮಹದೇವಸ್ವಾಮಿ, ಡಾ.ಚಂದನ್, ಡಾ.ಎಸ್.ಎಲ್. ಸುರೇಶ್, ಸಿ.ವಿ. ಮಲ್ಲಿಕಾರ್ಜುನ, ಸಾಹಿತಿ ಡಾ.ಮ.ರಾಮಕೃಷ್ಣ, ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ, ಗ್ರಾ.ಪಂ. ಸದಸ್ಯರಾದ ಕೆ.ವಿ. ಶ್ರೀನಿವಾಸ್, ಪುಟ್ಟರಾಮು, ಮುಖಂಡರಾದ ಕೆ.ಎಸ್.ಗೌಡ, ಮುಟ್ಟನಹಳ್ಳಿ ಶಿವಲಿಂಗೇಗೌಡ, ಅಣ್ಣೂರು ಸಿದ್ದಪ್ಪ, ದಾಸೇಗೌಡ, ಮಾದರಹಳ್ಳಿ ಸಿದ್ದಪ್ಪ ಇತರರು ಇದ್ದರು.