ಕುಕನೂರು: ಧಾರ್ಮಿಕ ಕಾರ್ಯಕ್ರಮ ಆಚರಣೆಯಲ್ಲಿ ರಾಜೂರು ಗ್ರಾಮಸ್ಥರ ಭಕ್ತಿ ಅಪಾರ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ತಾಲೂಕಿನ ರಾಜೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಿಂ.ಪಂಚಾಕ್ಷರ ಶಿವಾಚಾರ್ಯರ 5ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜೂರು ಗ್ರಾಮಸ್ಥರು ಹೃದಯಾಳದ ಭಕ್ತಿ ಸೇವೆಯಿಂದ ಧಾರ್ಮಿಕ ಕ್ಷೇತ್ರದಲ್ಲಿ ಶ್ರೇಷ್ಠತೆ ಪಡೆದಿದ್ದಾರೆ. ಮಹಾನ್ ಯೋಗಿಗಳು ಪಡೆಯಲಾಗದ ಸಿದ್ಧಿಯನ್ನು ಭಕ್ತಿ ಸೇವೆಯಿಂದ ಪಡೆಯಬಹುದು. ಇಲ್ಲಿನ ಲಿಂ.ಪಂಚಾಕ್ಷರ ಶಿವಾಚಾರ್ಯರ ಗದ್ದುಗೆಗೆ ಶಿಲಾ ಮಂಟಪ, ಮೂರ್ತಿ ಪ್ರತಿಷ್ಠಾಪಿಸಿದ್ದು ಗುರುವಿಗೆ ನೀಡಿದ ದೊಡ್ಡ ಸೇವೆ ಎಂದರು.
ಕಾಶಿ ಪೀಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಗುರುವಿನ ಆಶೀರ್ವಾದದಿಂದ ರಾಜೂರು ರಾಜರ ಊರಾಗಿದೆ. ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ಸಾಗಬೇಕು. ಊಟಕ್ಕೆ ಮಾಡಿದ ಮೊದಲ ರೊಟ್ಟಿ ನೀಡುವ ಗೋವನ್ನು ಕಟ್ಟಿ ಕೃಷಿ ಮಾಡಬೇಕು. ಟ್ರಾೃಕ್ಟರ್ ಬಳಕೆ ಕಡಿಮೆಯಾಗಬೇಕು. ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಜಮೀನಿನ ಕೆಲಸಕ್ಕೆ ಸಹಕರಿಸಬೇಕು. ಕೃಷಿ ಉನ್ನತ ಸ್ಥಾನಕ್ಕೆ ಬರಬೇಕು. ರೈತನ ಮಡದಿ ಕೃಷಿ ಕೆಲಸಕ್ಕೆ ಸಾಥ್ ನೀಡಬೇಕು. ಸಾಫ್ಟ್‌ವೇರ್ ಇಂಜಿನಿಯರ್ ಸಹ ಕೃಷಿಗೆ ವಾಲಿದ್ದಾರೆ. ಕೃಷಿಕರು ಹಾಗೂ ಸೈನಿಕರು ರಾಷ್ಟ್ರದ ಆಸ್ತಿ. ಮಳೆ, ಚಳಿ, ಬಿಸಿಲು ಅನ್ನದೇ ಶ್ರಮಿಸುತ್ತಾರೆ ಎಂದು ತಿಳಿಸಿದರು.
80 ಜನ ನಿವೃತ್ತ ಯೋಧರಿಗೆ ಪಂಚಾಕ್ಷರ ಪುತ್ರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರಾಜೂರಿನ ಅಭಿನವ ಶ್ರೀ ಪಂಚಾಕ್ಷರ ಶಿವಾಚಾರ್ಯರು ಮಾತನಾಡಿದರು. ಮಹಿಳೆಯರ ಕುಂಭ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಶ್ರೀಶೈಲ ಹಾಗೂ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಜರುಗಿತು. ಗ್ರಾಮದ ನೌಕರರು ಹಾಗೂ ನಿವೃತ್ತ ನೌಕರರು ಅನ್ನಪ್ರಸಾದ ಸೇವೆ ಸಲ್ಲಿಸಿದರು.