ಜಿಲ್ಲೆ

ಕುಶಾಲನಗರದಲ್ಲಿ ಗುಂಡೂರಾವ್ ಸ್ಮರಣೆ

ಕುಶಾಲನಗರ:

ನಾಡು ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಪರಿಶ್ರಮದ ಫಲವಾಗಿ ಕುಶಾಲನಗರ ಅಭಿವೃದ್ಧಿಯ ನಾಗಾಲೋಟದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಕುಶಾಲನಗರ ತಾಲೂಕು ಹೋರಾಟ ಸಮಿತಿಯ ರೂವಾರಿ ವಿ.ಪಿ. ಶಶಿಧರ್ ಹೇಳಿದರು. ಕುಶಾಲನಗರದ ಸಮಾನ ಮನಸ್ಕರ ವೇದಿಕೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಗುಂಡೂರಾವ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಮೂರು ದಶಕಗಳ ಹಿಂದೆಯೇ ಮುಂದಿನ ಮುವತ್ತು ವರ್ಷಗಳ ದೂರದೃಷ್ಟಿ ಹೊಂದುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಆರಂಭಿಸಿದ ಗುಂಡೂರಾವ್ ಅವರನ್ನು ಊರು ನಿತ್ಯವೂ ಸ್ಮರಿಸುವಂತಹ ರೀತಿಯಲ್ಲಿ ಅವರ ಪ್ರತಿಮೆಯನ್ನು ಕುಶಾಲನಗರದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಲೇಬೇಕಿದೆ.

ನಾವುಗಳು ಇನ್ನು ಹೇಳುವುದು ಬಿಟ್ಟು ಮಾಡಿ ತೋರಿಸುವತ್ತ ಮಗ್ನರಾಗುತ್ತೇವೆ. ಗುಂಡೂರಾವ್ ಪ್ರತಿಮೆ ಮಾಡಲು ಹೊರಟರೆ ಅವರ ಶಿಷ್ಯಂದಿರಾದ ಸಚಿವ ಕೆ.ಜೆ. ಜಾರ್ಜ್, ಕಾಂಗೈ ಧುರೀಣ ಹರಿಪ್ರಸಾದ್ ಮೊದಲಾದ ಘಟಾನುಘಟಿಗಳು ಅಗತ್ಯವಿರುವ ಎಲ್ಲಾ ಸಹಕಾರ ನೀಡಲಿದ್ದಾರೆ ಎಂದರು.

ಕುಶಾಲನಗರದ ಶ್ರೀ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ, ಗುಂಡೂರಾವ್ ಅವರ ಹೆಸರು ಕುಶಾಲನಗರ ಊರಿನೊಂದಿಗೆ ತಳುಕು ಹಾಕಿಕೊಂಡಿರುವುದರಿAದ ಅವರ ಹೆಸರನ್ನು ಊರಿನವರು ಒಗ್ಗೂಡಿ ಚಿರಸ್ಥಾಯಿಗೊಳಿಸಬೇಕೆಂದರು.

ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿ, ಗುಂಡೂರಾವ್ ಕುಶಾಲನಗರಕ್ಕೆ ಮಾಡಿದ ಅಭಿವೃದ್ದಿ ಯೋಜನೆಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಗುಂಡೂರಾವ್ ನಿಧನನಾಂತರದ ಯಾವುದೇ ರಾಜಕಾರಣಿಗಳು, ಜನಪ್ರತಿನಿಧಿಗಳಿಂದ ಕುಶಾಲನಗರದ ಪ್ರಗತಿ ಸಾಧ್ಯವಾಗಿಲ್ಲ ಎಂದರು.

ಸಮಾನ ಮನಸ್ಕ ವೇದಿಕೆ ಸಂಚಾಲಕ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಗುಂಡೂರಾವ್ ಕಟ್ಟಿ ಬೆಳೆಸಿದ ಕುಶಾಲನಗರದಲ್ಲಿ ಬದುಕು ಕಟ್ಟಿರುವ ಪ್ರತಿಯೊಬ್ಬರು ಅವರನ್ನು ಸ್ಮರಿಸಬೇಕು.

ಏಕೆಂದರೆ ಆ ಕಾಲ ಘಟ್ಟದಲ್ಲಿಯೇ ಶುದ್ಧ ಕಾವೇರಿ ಕುಡಿವ ನೀರಿನ ಯೋಜನೆ, ಕೈಗಾರಿಕಾ ಬಡಾವಣೆ ಹೀಗೆ ಅನೇಕ ಯೋಜನೆ ಜಾರಿಮಾಡಿದ ನೇತಾರ ಎಂದಿಗೂ ಸ್ಮರಣೀಯ ಎಂದರು.

ಕಾವೇರಿ ನದಿ ಸಂರಕ್ಷಣಾ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಕುಶಾಲನಗರ ಜಿಲ್ಲೆಯಲ್ಲಿಯೇ ಹೆಚ್ಚು ಅಭಿವೃದ್ದಿ ಹೊಂದಲು ಕಾರಣೀಭೂತರಾಗಿರುವ ಗುಂಡೂರಾವ್ ಅವರ ಹೆಸರಿನಲ್ಲಿ ಜಿಲ್ಲಾಡಳಿತ ಪ್ರತೀ ವರ್ಷ ಕಾರ್ಯಕ್ರಮ ರೂಪಿಸಬೇಕು. ಕುಶಾಲನಗರಕ್ಕೆ ಕಾಲಿಡುವ ಪ್ರತಿಯೊಬ್ಬರು ನಮಿಸುವಂತಹ ಗುಂಡೂರಾವ್ ಪ್ರತಿಮೆಯನ್ನು ಹೆದ್ದಾರಿಯಲ್ಲಿ ನಿರ್ಮಿಸಬೇಕೆಂದರು.

ಉದ್ಯಮಿ ಮಂಜುನಾಥ ಗುಂಡೂರಾವ್, ಎಸ್.ಎನ್. ರಾಜೇಂದ್ರ, ಪುರಸಭೆ ಸದಸ್ಯ ಬಿ.ಅಮೃತರಾಜು, ಮಾಜಿ ಸದಸ್ಯ ಎಂ. ನಂಜುAಡಸ್ವಾಮಿ ಮಾತನಾಡಿದರು.ಮಾಜಿ ಸದಸ್ಯ ಕೆ.ಜಿ. ಮನು, ಕಲಾವಿದ ರಾಜು, ಮಂಜುನಾಥ್, ಪ್ರಕಾಶ್, ಗಯಾಜ್ ಇತರರು ಇದ್ದರು.