ಜಿಲ್ಲೆ

ಕೆ.ಎಚ್.ರಾಮಯ್ಯ ಅವರ 91ನೇ ವರ್ಷದ ಪುಣ್ಯ ಸ್ಮರಣೆ

ಮೈಸೂರು: ಸ್ವಾತಂತ್ರೃ ಪೂರ್ವದಲ್ಲೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪರಿಕಲ್ಪನೆ ಮಂಡನೆ ಮಾಡಿದ ಕೆ.ಎಚ್.ರಾಮಯ್ಯ ಅವರ 91ನೇ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಕೆ.ಎಚ್.ರಾಮಯ್ಯ ಅವರ ಸಮಾಧಿ ಸ್ಥಳದಲ್ಲಿ ಸರಳವಾಗಿ ಆಚರಿಸಲಾದ ಸಂಸ್ಮರಣೆಯಲ್ಲಿ, ಮಹಾರಾಜರು ಸಮಾಜ ಕಲ್ಯಾಣ ಇಲಾಖೆ ಸೃಷ್ಟಿಸಿ ಅದಕ್ಕೆ ರಾಮಯ್ಯ ಅವರನ್ನು ನಿರ್ದೇಶಕರನ್ನಾಗಿ ಮಾಡಿದ್ದರು. ಆಗ ಇಡೀ ಮೈಸೂರು ರಾಜ್ಯವನ್ನು ಸುತ್ತಿ ಪ್ರತಿಯೊಂದು ಹಿಂದುಳಿದ ಜನಾಂಗವು ಹೇಗೆ ಅಭಿವೃದ್ಧಿ ಪಥದಲ್ಲಿ ನಡೆಯಬೇಕೆಂಬುದನ್ನು ತಿಳಿಸಿ ಮಾರ್ಗದರ್ಶನ ಮಾಡಿದರು ಎಂದು ಗಣ್ಯರು ವಿವರಿಸಿದರು.
ಸರ್ಕಾರಿ ಅಧಿಕಾರಿ ಎಂಬ ಯಾವುದೇ ನಿರ್ಬಂಧಗಳು ಇರಲಿಲ್ಲ. ಸರ್ಕಾರದ ಉನ್ನತ ಅಧಿಕಾರಿಯೊಬ್ಬ ನಿರಂಕುಶ ರಾಜಪ್ರಭುತ್ವದ ಕಾಲದಲ್ಲಿ ರಾಜಕೀಯ ಪಕ್ಷಗಳು ಅಧ್ಯಕ್ಷತೆ ವಹಿಸಿದ್ದು, ಆ ಬಗ್ಗೆ ರಾಜಕಾರಣಿಗಳೊಂದಿಗೆ ಬೆರೆತು ಚರ್ಚೆ ನಡೆಸಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ ದೂರದರ್ಶಿತ್ವದ ಸಂಕೇತವಾಗಿದೆ ಎಂದು ಹೇಳಬಹುದು ಎಂದರು.
ಸಮಾಜದ ಎಲ್ಲ ತಳಸ್ಥರದ ಸಮುದಾಯಗಳು ಶೈಕ್ಷಣಿಕವಾಗಿ ಮೇಲೆ ಬರಬೇಕು. ಸಂಘಟಿತರಬೇಕು ಶಿಕ್ಷಣವೇ ಸಮಾಜ ಮೇಲ್ಮುಖ ಸಾಗಲು ಇರುವ ರಹದಾರಿ ಎಂಬುದನ್ನು ಪಸರಿಸಿದರು. ಹಾಗಾಗಿ ಅಂದಿಗೆ ಹರಿಜನರ ಶ್ರೇಯಾಭಿವೃದ್ಧಿಗಾಗಿ ಶಿಕ್ಷಣಕ್ಕಾಗಿ ಮಳವಳ್ಳಿಯಲ್ಲಿ ಪ್ರಥಮ ದಲಿತರ ಶಿಕ್ಷಣಕಾಗಿ ಶಾಲೆಯೊಂದನ್ನು ಸ್ಥಾಪನೆ ಮಾಡಿದರು. ಜತೆಗೆ ಆ ಶಾಲೆಗೆ ಶಿಕ್ಷಕರಾಗಲು ಯಾರು ಮುಂದೆ ಬಾರದಾಗ ತಲಕಾಡಿನ ರಂಗೇಗೌಡ ಅವರನ್ನು ಅಲ್ಲಿನ ಶಿಕ್ಷಕರಾಗಿ ನೇಮಿಸುವುದರ ಮೂಲಕ ದಲಿತರಿಗೂ ಶಿಕ್ಷಣ ನೀಡುವ ಮೈಸೂರು ಸಂಸ್ಥಾನದ ಮಹತ್ವಕಾಂಕ್ಷಿಯ ಯೋಜನೆಗೆ ಸಹಕಾರ ನೀಡಿದರು ಎಂದು ಸ್ಮರಿಸಿದರು.
ಹಿಂದುಳಿದ ವರ್ಗಗಳು ಅಭಿವೃದ್ಧಿ ಕಾಣಬೇಕೆಂದರೆ ಶಿಕ್ಷಣ ಬೇಕು ಎನ್ನುವ ಆಶಯ ಇಟ್ಟುಕೊಂಡಿದ್ದ ಕೆ.ಎಚ್. ರಾಮಯ್ಯ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳಲು ಆಯಾ ಸಮುದಾಯಗಳ ಸಂಘಗಳನ್ನು ಸ್ಥಾಪಿಸಿದರು. ಆದಿ ದ್ರಾವಿಡ ಸಂಘ , ರಾಜ್ಯ ಒಕ್ಕಲಿಗರ ಸಂಘ, ಕುರುಬರ ಸಂಘ ಸೇರಿದಂತೆ ಇನ್ನಿತರ ಹಲವು ಸಂಘಗಳನ್ನು ಸ್ಥಾಪನೆ ಮಾಡಿ ಆ ಸಂಘಟನೆಗಳ ಮೂಲಕ ಆಯಾ ಸಮುದಾಯಗಳು ಶಿಕ್ಷಣ ಪಡೆಯಲು ಸಮಾಜದಲ್ಲಿ ಉನ್ನತಿ ಕಾಣಲು ಪ್ರೇರೇಪಿಸಿದರು ಎಂದರು.
ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟಿನ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ, ಮೈಸೂರು ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೃಷ್ಣ, ಜಿಲ್ಲಾ ಒಕ್ಕಲಿಗರ ಸಂಘದ ಚೇತನ್, ಬೆಳವಾಡಿ ಶ್ರೀನಿವಾಸ್, ಡಾ. ಲೋಕೇಶ್, ಕೆ.ಎಚ್.ರಾಮಯ್ಯ ಹಾಸ್ಟೆಲಿನ ಹಿರಿಯ ವಿದ್ಯಾರ್ಥಿಗಳು ಇದ್ದರು.