ಜಿಲ್ಲೆ

ಸ್ಮರಣ ಸಂಚಿಕೆಯಲ್ಲಿ ಕನ್ನಡಕ್ಕೆ ಆದ್ಯತೆ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಿಡುಗಡೆ ಮಾಡಲಾಗುವ ಸ್ಮರಣ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ನೆಲ, ಭಾಷೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸ್ಮರಣಾ ಸಂಚಿಕೆ ಸಮಿತಿ ಅಧ್ಯಕ್ಷರೂ ಆದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಮರಣ ಸಂಚಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಮೂಲದವರಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ವ್ಯಕ್ತಿಗಳ ಬಗ್ಗೆ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಬೇಕು. ಜತೆಗೆ ಜಿಲ್ಲೆಯಲ್ಲಿ ಸಾಧನೆಗೈದ ಸಾಹಿತಿಗಳು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಸಾಹಿತ್ಯ ಹಾಗೂ ಕೊಡುಗೆಗಳು ಒಳಗೊಂಡಂತೆ ಸ್ಮರಣ ಸಂಚಿಕೆ ರಚನೆಯಾಗಬೇಕು ಎಂದರು.

ಇಂದಿನ ಯುವ ಜನರಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಸ್ಮರಣಾ ಸಂಚಿಕೆಯಲ್ಲಿ ಈ ವಿಷಯ ಹೆಚ್ಚು ಪರಿಣಾಮಕಾರಿಯಾಗಿ ಮೂಡಿ ಬರಲಿ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದ್ದು, ಸಮ್ಮೇಳನದ ಸ್ಮರಣ ಸಂಚಿಕೆಯು ಓದುಗರ ಸವಿ ನೆನೆಪಿನಲ್ಲಿ ಉಳಿಯುವ ಮಾಹಿತಿ ಬಂಡಾರವಾಗಬೇಕು. ಎಲ್ಲರ ಸಮನ್ವಯದೊಂದಿಗೆ ಲೇಖನಗಳು ಮೂಡಿ ಬರಬೇಕು. ರಾಜಕೀಯದಲ್ಲಿ ಕೆಲಸ ಮಾಡಿದ ಹಲವಾರು ನಾಯಕರು ರಾಜ್ಯ ಹಾಗೂ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ’ರಾಜಕೀಯ ಪ್ರಬುದ್ಧರು’ ಎಂಬ ಲೇಖನ ಮೂಡಿಬರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶೀರ್ಷಿಕೆ ಆಹ್ವಾನ ಸ್ಮರಣ ಸಂಚಿಕೆಗೆ ಶೀರ್ಷಿಕೆಯನ್ನು ಸಾರ್ವಜನಿಕರು ಲಿಖಿತ ರೂಪದಲ್ಲಿ ಪತ್ರದ ಮೂಲಕ ತಮ್ಮ ಹೆಸರು, ವಿಳಾಸದೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಸೆ.30ರೊಳಗಾಗಿ ಜಿಲ್ಲಾ ಗ್ರಂಥಾಲಯಕ್ಕೆ ತಲುಪಿಸಬೇಕು. ಆಯ್ದ ಅತ್ಯುತ್ತಮ ಶೀರ್ಷಿಕೆಗೆ ಗೌರವ ಪುರಸ್ಕಾರ ಸಲ್ಲಿಸಲಾಗುವುದು. ಸಮ್ಮೇಳನದಲ್ಲಿ ಸ್ಮರಣ ಸಂಚಿಕೆಗೆ ಸಂಬಂಧಿಸಿದಂತೆ ಅಕ್ಷರದ ಗಾತ್ರ, ನಿರ್ದಿಷ್ಟ ಪುಟ ವಿನ್ಯಾಸ, ಫಾಂಟ್, ಪುಟಗಳ ಸಂಖ್ಯೆ ಇನ್ನಿತರೆ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಲೇಖನವನ್ನು ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿ, ಸಮ್ಮೇಳನ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ಶ್ರಮ ವಹಿಸಿ ನಿರ್ವಹಿಸಬೇಕು. ಸ್ಮರಣ ಸಂಚಿಕೆಯಲ್ಲಿರುವವರು ಲೇಖನ ರಚನೆಗೆ ಬೇಕಾದ ಎಲ್ಲ ವಿಷಯಗಳನ್ನು ಸಂಗ್ರಹಿಸಿ. ಇರುವ ಸಣ್ಣ ಸಮಯದಲ್ಲಿ ಉತ್ತಮ ಸಂಪುಟ ರಚಿಸೋಣ ಎಂದರು.

ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸಂಚಿಕೆ ಎಲ್ಲವನ್ನು, ಎಲ್ಲರನ್ನು ಒಳಗೊಂಡ ನೆನಪಿನ ಸಂಪುಟವಾಗಲಿದೆ. ಇವುಗಳ ಜತೆಗೆ ಶಿಕ್ಷಣ ಮತ್ತು ಸಾಹಿತ್ಯದ ಮೇಲೆ ಕಂಪ್ಯೂಟರ್ ಪ್ರಭಾವ, ಇತ್ತೀಚಿಗೆ ಬೆಳವಣಿಗೆಯಾಗುತ್ತಿರುವ ಕೃತಕ ಬುದ್ಧಿಮತ್ತೆ, ರಸ್ತೆಯ ಮೇಲೆ ನಿಲ್ಲುವ ಮಳೆ ನೀರು ನಿರ್ವಹಣೆ ಮತ್ತು ಅದರ ಪರಿಣಾಮ ಮುಂತಾದ ವಿಷಯಗಳು ಇದರಲ್ಲಿರಲಿ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಸ್ಮರಣ ಸಂಚಿಕೆಗೆ ಒಂದು ಒಳ್ಳೆಯ ಚೌಕಟ್ಟು ಸಿಕ್ಕಿದೆ. ಜಿಲ್ಲೆಯ ಜಲಮೂಲಗಳ ಸ್ಥಿತಿ ಮತ್ತು ಸಂರಕ್ಷಣೆ, ಗಾಂಧಿ ಭವನ, ಕೆ.ವಿ.ಶಂಕರಗೌಡ ಮತ್ತು ಜಿ.ಮಾದೇಗೌಡ ಅವರ ಬಗ್ಗೆ ಬರಹಗಳು ಇರಲಿ ಎಂದರು.

ಸಮಿತಿ ಸಂಚಾಲಕ ಮ.ರಾಮಕೃಷ್ಣ, ಸ್ಮರಣ ಸಂಚಿಕೆಯನ್ನು 10 ವಿಭಾಗದಲ್ಲಿ ವಿಂಗಡಿಸಲಾಗಿದೆ. ಆಶೀರ್ವಚನ- ಸಂದೇಶ, ಪ್ರಾಸ್ತಾವಿಕ ನುಡಿ, ಸಮ್ಮೇಳನ ಅಧ್ಯಕ್ಷರ ಪರಿಚಯ, ಹಿಂದೆ ನಡೆದ ಎರಡು ಸಮ್ಮೇಳನಗಳ ಅಧ್ಯಕ್ಷರ ಭಾಷಣ ಮತ್ತು ನೆನಪಿನ ಬರಹ, ಮಧುರ ಮಂಡ್ಯ, ಮಂಡ್ಯ- ಕರ್ನಾಟಕ-ಭಾರತ, ವಿಶ್ವ ಕರ್ನಾಟಕ, ಚಿತ್ರ ಸಂಪುಟ ಮತ್ತು ಅನುಬಂಧಗಳ ವಿಭಾಗಗಳಿರುತ್ತವೆ. ಇದೊಂದು ಆದರ್ಶ, ಮಾದರಿ, ಅನುಕರಣೀಯ ನೆನಪಿನ ಸಂಪುಟವಾಗಲಿದೆ ಎಂದರು

ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ಮಾತನಾಡಿ, 1974ರ ಮೊದಲ ಸಮ್ಮೇಳನ ನಡೆದ ದಿನದಿಂದ ಇಂದಿನವರೆಗೆ ನಡೆದಿರುವ ಸಾಹಿತ್ಯ-ಸಂಸ್ಕೃತಿ ಅವಲೋಕನಗಳ ಬರಹಗಳನ್ನೊಳಗೊಂಡ ಬಹುತ್ವದ ಸಂಸ್ಕೃತಿಯನ್ನು ಪ್ರತಿನಿಧಿಸುವ ಲೇಖನವಿರಲಿ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಮಹದೇವ ಹುಲ್ಕೆರೆ ಮಾತನಾಡಿ, ಬಿಎಂಶ್ರೀ ಅವರಿಂದ ಪ್ರಾರಂಭವಾಗಿ ಕನ್ನಡ ಕಟ್ಟುವ ಬಗೆಗಿನ ಮಾದರಿ, ಇತಿಹಾಸದ ಸ್ಥೂಲ ಅವಲೋಕನ ಮತ್ತು ಪರಿಣಾಮಗಳು, ರಾಜಕೀಯ ಅನನ್ಯತೆ ದೊರಕಿಸಿಕೊಟ್ಟವರು ಇದರಿಂದ ಉಂಟಾದ ಪ್ರೇರಣೆ ಮುಂತಾದವುಗಳನ್ನು ದಾಖಲಿಸಬೇಕು ಎಂದರು.

ಸಾಹಿತಿ ಚಿಕ್ಕಮರಳಿ ಬೋರೇಗೌಡ, ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್, ಶಿಕ್ಷಕ ನಂದೀಶ್, ಸಾಹಿತಿ ಲೀಲಾ ಅಪ್ಪಾಜಿ ಮಾತನಾಡಿದರು. ಸಭೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಹರ್ಷ ವಿ.ಪಣ್ಣೆದೊಡ್ಡಿ, ಬಿ.ಎಂ.ಅಪ್ಪಾಜಪ್ಪ, ಹೊಳಲು ಶ್ರೀಧರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಎಚ್.ವಿ.ಜಯರಾಂ, ಸುಧಾಕರ್ ಹೊಸಹಳ್ಳಿ, ಎಸ್.ಬಿ.ಶಂಕರಗೌಡ, ಎಂ.ವೈ.ಶಿವರಾಮು, ಎಂ.ಬಿ.ಸುರೇಶ್, ಶ್ಯಾಮೇಶ್, ಸುಜಾತಾ ಕೃಷ್ಣ ಇತರರಿದ್ದರು.