ವಿಜಯಪುರ: ಜ್ಞಾನಯೋಗಾಶ್ರಮದಲ್ಲಿ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಗುರುಪೂರ್ಣಿಮೆ ಗುರುವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಪ್ರತಿ ವರ್ಷದಂತೆ ಈ ವರ್ಷವೂ ನಗರದ ಆಶ್ರಮ ಕಾಲನಿಯಲ್ಲಿರುವ ಜ್ಞಾನ ಯೋಗಾಶ್ರಮದಲ್ಲಿ ನಡೆದ ಗುರುಪೂರ್ಣಿಮೆಯಲ್ಲಿ ಕರ್ನಾಟಕ&ಮಹಾರಾಷ್ಟ್ರದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಿದ್ಧೇಶ್ವರ ಶ್ರೀಗಳು ಆಶ್ರಮದಲ್ಲೆ ಇದ್ದಾರೆ. ಅವರ ದೇಹ ಮಾತ್ರ ಇಲ್ಲ, ಆತ್ಮ ಆಶ್ರಮದಲ್ಲೆ, ಭಕ್ತರ ಜೊತೆಯಲ್ಲಿಯೇ ಇದೆ ಎನ್ನುವ ಭಾವ ಭಕ್ತರ ಮುಖದಲ್ಲಿ ಕಂಡು ಬಂದಿತು.
ನಾಡಿನ ವಿವಿಧ ಜಿಲ್ಲೆಗಳಿಂದ ಭಕ್ತ ಸಮೂಹ ಹರಿದು ಬಂದಿತ್ತು. ಆಶ್ರಮದಲ್ಲಿ ಬೆಳಗ್ಗೆ 4.30 ರಿಂದ 6.30 ರವರೆಗೆ ನಡೆದ ಮಹಾಜಪಯೋಗ ಕಾರ್ಯಕ್ರಮ, ನಂತರ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಶಿವಯೋಗಿಗಳ ಪ್ರವಚನದ ಧ್ವನಿಸುರುಳಿಯನ್ನು ಭಕ್ತಿ ಭಾವದಿಂದ ನೆರೆದವರು ಆಲಿಸಿದರು. ಬೆಳಗ್ಗೆ 7.30ಕ್ಕೆ ಪ್ರಾರಂಭವಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ (ಗದ್ದುಗೆಗೆ) ಪ್ರಣವ ಮಂಟಪ ಪೂಜೆ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಪೂಜೆ ನೆರವೇರಿತು. ಪ್ರಣವ ಮಂಟಪದ ಪಕ್ಕದಲ್ಲೆ ವಿವಿಧ ಬಣ್ಣದ ಹೂವುಗಳಿಂದ ಅಲಂಕೃತವಾಗಿದ್ದ ಹೂವಿನ ಮಂಟಪದಲ್ಲಿ ಇರಿಸಲಾಗಿದ್ದ ಶತಮಾನದ ಸಂತ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಆಶ್ರಮದ ಆವರಣದಲ್ಲಿ ಶ್ರೀ ಸಿದ್ಧೇಶ್ವರ ಅಪ್ಪಾವರ ಕುರಿತು ಹಾಡು ಕಟ್ಟಿ ಹಾಡಿದ್ದ ಗಾಯಕರಿಂದ ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ಸಾಂಸತಿಕ ಕಾರ್ಯಕ್ರಮ ನಡೆದವು. ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಆಶ್ರಮದಲ್ಲಿ ಸಿದ್ಧೇಶ್ವರ ಶ್ರೀಗಳ ಅಪರೂಪದ ಭಾವಚಿತ್ರಗಳ ಪ್ರದರ್ಶನ ನಡೆಯಿತು.
ಗುರುಪೂರ್ಣಿಮಾ ಹಾಗೂ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣೋತ್ಸವದಲ್ಲಿ ಹಲವು ಸ್ವಾಮೀಜಿಗಳು, ಪೂಜ್ಯರು, ಜನಪ್ರತಿನಿಧಿಗಳು, ವ್ಯಾಪಾರಸ್ಥರು, ಸಾಹಿತಿಗಳು ಹಾಗೂ ವಿವಿಧ ಸಂ ಸಂಸ್ಥೆಗಳ ಪ್ರಮುಖರು ಭಕ್ತಿಯ ಸೇವೆ ಸಲ್ಲಿಸಿದರು.
ಭಕ್ತರ ಅನುಕೂಲಕ್ಕಾಗಿ ನಗರ ಸಾರಿಗೆ ಬಸ್ ಸಂಚಾರ ವ್ಯವಸ್ಥೆ ಹೆಚ್ಚಿಸಿತ್ತು. ಸಿದ್ಧೇಶ್ವರ ಸ್ವಾಮೀಜಿಗಳ ಭಾವಚಿತ್ರ, ಪ್ರವಚನ ಕುರಿತಾದ ಪುಸ್ತಕಗಳು, ವಿಭೂತಿ, ಪವಿತ್ರ ದಾರಗಳ ಖರೀದಿಯಲ್ಲಿ ಭಕ್ತಾದಿಗಳು ತೊಡಗಿರುವ ದೃಶ್ಯ ಸಾಮಾನ್ಯವಾಗಿತ್ತು.