ಹಾಸನ: ಅರಣ್ಯ ಸಂರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ಸಿಬ್ಬಂದಿಯನ್ನು ಸ್ಮರಿಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಹೇಮಾವತಿ ಹೇಳಿದರು.
ಅರಣ್ಯ ಇಲಾಖೆ ವತಿಯಿಂದ ನಗರದ ಅರಣ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡಿ, ಕಾಡುಗಳ್ಳ ವೀರಪ್ಪನ್‌ನಿಂದ ಡಿಸಿಎಫ್ ಪಿ.ಶ್ರೀನಿವಾಸ್ ಅವರು ಹತ್ಯೆಯಾದ ಬಳಿಕ ಜನರಿಗೆ ಅರಣ್ಯ ಇಲಾಖೆ ನೌಕರರು ಅನುಭವಿಸುವ ಕಷ್ಟ-ನಷ್ಟಗಳು ಅರಿವಿಗೆ ಬಂದವು. ಕಾಡು ಪ್ರಾಣಿಗಳು ಹಾಗೂ ಅರಣ್ಯ ಸಂರಕ್ಷಣೆಗಾಗಿ ಸಿಬ್ಬಂದಿ ಮಾಡುವ ಕೆಲಸಕ್ಕೆ ಬೆಲೆ ಕಟ್ಟಲಾಗುವುದಿಲ್ಲವೆಂದು ಅರಣ್ಯ ಸಂರಕ್ಷಣೆ ಮನುಷ್ಯನ ಉಳಿಯುವಿಕೆಯ ಭಾಗ. ಮೊದಲೆಲ್ಲ ಸಕಾಲದಲ್ಲಿ ಮಳೆ ಆಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಲಾಭಕ್ಕಾಗಿ ಪರಿಸರ ಹಾಳು ಮಾಡುತ್ತಿದ್ದೇವೆ. ಕಾಡುಪ್ರಾಣಿಗಳು ನಾಡಿಗೆ ಬರುವಂತೆ ನಾವೇ ಮಾಡಿದ್ದೇವೆ. ಈ ಲೋಪದಲ್ಲಿ ಅಭಿವೃದ್ಧಿ ಜತೆಗೆ ವೈಯಕ್ತಿಕ ಹಿತಾಸಕ್ತಿಯು ಅಡಗಿದೆ. ಅರಣ್ಯ ಸಂರಕ್ಷಣೆಗಾಗಿ ಜೀವದ ಹಂಗು ತೊರೆದು ಕುಟುಂಬವನ್ನು ಮರೆತು ಮಡಿದ ಸಿಬ್ಬಂದಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.
2013ರಿಂದ ರಾಷ್ಟ್ರದಲ್ಲಿ ಹುತಾತ್ಮ ಅರಣ್ಯ ಹುತಾತ್ಮರ ದಿನಾಚರಣೆ ಜಾರಿಗೆ ಬಂದಿದೆ. ಬೇರೆಯವರ ಉತ್ತಮ ಬದುಕಿಗಾಗಿ ತಮ್ಮ ಪ್ರಾಣ ತ್ಯಜಿಸಿದ ಮಹನೀಯರಿಗೆ ಗೌರವಿಸೋಣ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕಾನೂನು ಎಷ್ಟೇ ಬಿಗಿಯಾಗಿದ್ದರೂ ಅರಣ್ಯ ನಾಶ, ಒತ್ತುವರಿ ನಡೆಯುತ್ತಲೇ ಇದೆ. ಈ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಬೇಕೆಂದರು.
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಜೀವವನ್ನು ತೊರೆದು ಅರಣ್ಯಕ್ಕಾಗಿ ಪ್ರಾಣ ಬಿಟ್ಟವರ ಬಗ್ಗೆ ಹೆಮ್ಮೆಯಾಗುತ್ತದೆ. ಪರಿಸರ ಸಮತೋಲನಕ್ಕೆ ಅರಣ್ಯ ಅತ್ಯವಶ್ಯ. ಕಾಡು ಪ್ರಾಣಿಗಳ ಉಪಟಳ ನಿಯಂತ್ರಣ, ಅರಣ್ಯ ಸಂಪತ್ತು ನಾಶದ ವಿರುದ್ಧ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ವಹಿಸುವ ಪಾತ್ರ ಮೆಚ್ಚುವಂತಹುದು. ಮನುಷ್ಯರು ಮತ್ತು ಕಾಡುಪ್ರಾಣಿಗಳ ನಡುವೆ ಸೇತುವೆಯಾಗಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಇಲಾಖೆಯ ಕೆಳ ಹಂತದ ಸಿಬ್ಬಂದಿ ಕೆಲಸ ಕಷ್ಟಕರವಾಗಿದ್ದು ಅವರಿಗೆ ಗೌರವಿಸಲೇಬೇಕೆಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಜಿ.ಕೆ.ದಾಕ್ಷಾಯಿಣಿ ಅವರು ಮಾತನಾಡಿ, ಅರಣ್ಯ ಇಲಾಖೆಯ ಹೊರ ಗುತ್ತಿಗೆ ನೌಕರರು ಕರ್ತವ್ಯ ವೇಳೆ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಬದಲಾವಣೆ ತರಬೇಕು. ಸರ್ಕಾರ ಆ ನಿಟ್ಟಿನಲ್ಲಿ ಯೋಚಿಸಬೇಕೆಂದರು.
ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಮಾತನಾಡಿ, 1730ರಲ್ಲಿ ರಾಜಸ್ಥಾನದ ಖೇಜ್ರಿ ಗ್ರಾಮದಲ್ಲಿ ಮಹಾರಾಜ ಅಭಯ್ ಸಿಂಗ್ ಅವರ ಆದೇಶದಂತೆ ಖೇಜ್ರಿ ಮರಗಳನ್ನು ಕಡಿಯಲು ಮುಂದಾದಾಗ ಬಿಷ್ಣೋಯ್ ಸಮುದಾಯದ 363 ಜನರು ಮರಗಳನ್ನು ರಕ್ಷಿಸಲು ತಮ್ಮ ಪ್ರಾಣ ತ್ಯಾಗ ಮಾಡಿದರು. ಅವರ ದಿನವನ್ನು ಕೇಂದ್ರ ಸರ್ಕಾರ ಹುತಾತ್ಮರ ದಿನವಾಗಿ ಘೋಷಿಸಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಡಿಸಿಎಫ್ ಸೌರಭ್‌ಕುಮಾರ್, ಅಧಿಕಾರಿಗಳಾದ ಕಾವ್ಯಶ್ರೀ, ಶಾಂತಕುಮಾರ್, ಮೋಹನ್ ಕುಮಾರ್ ಇತರರಿದ್ದರು.