ಸೊರಬ: ಒತ್ತಡದ ಬದುಕಿನಲ್ಲಿ ಶಿವಾನುಭವದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ನೆಮ್ಮದಿ ಕಂಡುಕೊಳ್ಳಬೇಕು ಎಂದು ಮರುಘಾ ಮಠ, ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾಮಠದಲ್ಲಿ ಗುರುವಾರ ಶ್ರೀ ಕುಮಾರಪ್ರಭು ಸ್ವಾಮಿಗಳವರ ಸ್ಮಾರಕ ಟ್ರಸ್ಟ್ ಜಡೆ, ಶರಣ ಸಾಹಿತ್ಯ ಪರಿಷತ್ ಕದಳಿ ವೇದಿಕೆ ಹಾಗೂ ಅಕ್ಕನ ಬಳಗ ಸೇವಾ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಶಿವಾನುಭವ ಹಾಗೂ ರಕ್ಷಾ ಬಂಧನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶ್ರೀ ಮಠದಲ್ಲಿ ನಿರಂತರ ಭಕ್ತಿ, ನೆಮ್ಮದಿ, ಬದುಕಿನ ಸಾರ್ಥಕತೆಗೆ ಸಹಕಾರಿಯಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾರಾಯಣಗುರು ಜಯಂತಿ, ರಕ್ಷಾ ಬಂಧನ, ನುಲಿಯ ಚಂದಯ್ಯ ಜಯಂತಿಯಂದು ನಡೆದ ಶಿವಾನುಭವ ಕಾರ್ಯಕ್ರಮ ಹೊಸ ಸಂದೇಶ ನೀಡಿದೆ ಎಂದರು.
ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಂಜಾಟಗಳಿಂದ ಹೊರ ಬರಲು ಮನುಷ್ಯ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಬದುಕಿನಲ್ಲಿ ಕಾಯಕ, ಭಕ್ತಿ ಮುಖ್ಯ. ಯುವ ಜನತೆಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಸತ್ಸಂಗದಲ್ಲಿ ಪಾಲ್ಗೊಳ್ಳಲು ತಿಳಿಸಬೇಕು ಎಂದರು.
ವಾಗ್ಮಿ ಮಹಂತೇಶ್ ಕಳ್ಳಿಕೊನೆ ಉಪನ್ಯಾಸ ನೀಡಿದರು. ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಚೇತನಕ್ಕ, ಮಠದ ಕಾರ್ಯದರ್ಶಿ ಡಿ.ಶಿವಯೋಗಿ, ಉಪನ್ಯಾಸಕ ರಾಜಶೇಖರಗೌಡ, ಉದ್ಯಮಿ ನಾಗರಾಜ್ ಗುತ್ತಿ, ಜಯಮಾಲಾ ಇತರರಿದ್ದರು. ಮಲ್ಲಿಕಾರ್ಜುನ ಗೌಡ ತ್ಯಾವಗೋಡು ಅನ್ನ ದಾಸೋಹ ಏರ್ಪಡಿಸಿದ್ದರು.