- ಪ್ರಕಾಶ್ ಮಂಜೇಶ್ವರ ಮಂಗಳೂರು
ದೌರ್ಜನ್ಯಕ್ಕೆ ಒಳಗಾಗಿರುವ ಹೆಣ್ಮಕ್ಕಳಿಗೆ ಸಾಂತ್ವನ ಹೇಳುವ, ತಾತ್ಕಾಲಿಕ ಆಶ್ರಯ, ರಕ್ಷಣೆ, ಆರ್ಥಿಕ ಪರಿಹಾರ ನೀಡುವ ಮಹಿಳಾ ಸಾಂತ್ವನ ಕೇಂದ್ರಗಳೇ ಸ್ವತಃ ಸಂಕಷ್ಟಕ್ಕೆ ಸಿಲುಕಿವೆ.
ಸರ್ಕಾರೇತರ ಸಂಘಸಂಸ್ಥೆಗಳ (ಎನ್‌ಜಿಒ) ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುತ್ತಿರುವ ರಾಜ್ಯದ ಸಾಂತ್ವನ ಕೇಂದ್ರಗಳಿಗೆ 2020-21ನೇ ಸಾಲಿನ ಅನುದಾನವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ.
ಈ ಕಾರಣದಿಂದ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿರುವ ಸಾಂತ್ವನ ಕೇಂದ್ರಗಳ ನಿರ್ವಹಣೆ ಮತ್ತು ಸಿಬ್ಬಂದಿಗೆ ವೇತನ ಬಟವಾಡೆ ಮಾಡುವುದು ಸಮಸ್ಯೆಯಾಗಿದೆ. ಸಾಮಾನ್ಯವಾಗಿ ವಾರ್ಷಿಕ ನಾಲ್ಕು ಕಂತುಗಳಲ್ಲಿ ಸಾಂತ್ವನ ಕೇಂದ್ರದ ಹಣ ಸರ್ಕಾರದಿಂದ ಬಿಡುಗಡೆಯಾಗುತ್ತದೆ. ಆದರೆ ಈ ವರ್ಷ ಇಲ್ಲಿಯ ತನಕ ಒಂದು ಕಂತು ಹಣ ಕೂಡ ಬಿಡುಗಡೆಯಾಗಿಲ್ಲ.
ಹಿಂದೊಮ್ಮೆ ಸಾಂತ್ವನ ಕೇಂದ್ರ ಮುಚ್ಚುವ ಪ್ರಸ್ತಾವ ಸರ್ಕಾರದ ಕಡೆಯಿಂದಲೇ ಇತ್ತು. ಆದರೆ ಸಾರ್ವಜನಿಕರ ಒತ್ತಾಯ ಬಳಿಕ ಕೇಂದ್ರವನ್ನು ಮುಂದುವರಿಸುವ ತೀರ್ಮಾನವನ್ನು ಮುಖ್ಯಮಂತ್ರಿಯವರು ಪ್ರಕಟಿಸಿದ್ದರು.
ಕೌಟುಂಬಿಕ, ಲೈಂಗಿಕ ಸಹಿತ ಎಲ್ಲ ರೀತಿಯ ದೌರ್ಜನ್ಯಗಳನ್ನು ಎದುರಿಸುವ ಮಹಿಳೆಯರಿಗಾಗಿ ಸಾಂತ್ವನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಪ್ರತೀ ಕೇಂದ್ರದಲ್ಲಿ ಓರ್ವ ಆಪ್ತ ಸಮಾಲೋಚಕರು ಹಾಗೂ ಮೂವರು ಸಮಾಜ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಾರೆ.
2001- 02ನೇ ಸಾಲಿನಲ್ಲಿ ಮಹಿಳಾ ಸಾಂತ್ವನ ಕೇಂದ್ರ ವ್ಯವಸ್ಥೆ ಆರಂಭಗೊಂಡಿದ್ದು, ದಕ್ಷಿಣ ಕನ್ನಡದಲ್ಲಿ ಐದು ಸಹಿತ ರಾಜ್ಯದಲ್ಲಿ 187 ಕೇಂದ್ರಗಳಿವೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಗಳು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ನಡೆಸುತ್ತಿದೆ.
ಹಣಕಾಸಿನ ತೊಂದರೆಯಿಂದ ಸ್ವಲ್ಪ ವಿಳಂಬವಾಗಿದೆ. ಸಮಸ್ಯೆಯನ್ನು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗಿದೆ. ಬಾಕಿ ಉಳಿದಿರುವ ಅನುದಾನ ಶೀಘ್ರ ಬಿಡುಗಡೆಗೊಳಿಸುವ ಕುರಿತು ಭರವಸೆ ದೊರೆತಿದೆ.
- ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ
ಅನುದಾನ ವಿಳಂಬದಿಂದ ಸಾಂತ್ವನ ಕೇಂದ್ರಗಳನ್ನು ನಿರ್ವಹಿಸಲು ಮತ್ತು ಕೇಂದ್ರದ ಸಿಬ್ಬಂದಿಗೆ ಗೌರವಧನ ಒದಗಿಸಲು ಸಮಸ್ಯೆಯಗುತ್ತಿರುವ ಬಗ್ಗೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಪತ್ರ ಬರೆಯಲಾಗಿದೆ.
- ಶೀನ ಶೆಟ್ಟಿ, ನಿರ್ದೇಶಕ, ಜನ ಶಿಕ್ಷಣ ಟ್ರಸ್ಟ್, ದಕ್ಷಿಣ ಕನ್ನಡ