ವಿಜಯವಾಣಿ ಸುದ್ದಜಾಲ ಉಡುಪಿ
ಅಕ್ಟೋಬರ್ ತಿಂಗಳ ಮೂರನೇ ವಾರದ ಕೊನೆಗೆ ಹಾಗೂ ಅಕ್ಟೋಬರ್ ಅಂತ್ಯಕ್ಕೆ ಲೆಮೆನ್, ಸ್ವಾನ್, ಅಟ್ಲಸ್ ಎಂಬ ಮೂರು ಧೂಮಕೇತುಗಳು ದೀರ್ಘವೃತ್ತದಲ್ಲಿ ಸೂರ್ಯನನ್ನು ಸುತ್ತು ಹೊಡೆಯುತ್ತಿರುವುದು ಗೋಚರಿಸಲಿವೆ. ಅವುಗಳಲ್ಲಿ ಲೆಮೆನ್ ಧೂಮಕೇತು ಮಾತ್ರ ಬರಿಗಣ್ಣಿಗೆ ಕಾಣಿಸುತ್ತಿದೆ ಎಂದು ಭೌತಶಾಸ್ತ್ರಜ್ಞ ಉಡುಪಿಯ ಡಾ. ಎ.ಪಿ. ಭಟ್ ಮಾಹಿತಿ ನೀಡಿದ್ದಾರೆ.
ನ.8ರಂದು ಸೂರ್ಯನ ಸಮೀಪ ತಲುಪಿ ಹಿಂತಿರುಗುತ್ತದೆ. ಸುಮಾರು 1,350 ವರ್ಷಗಳಿಗೊಮ್ಮೆ ಈ ಲೆಮೆನ್ ಧೂಮಕೇತು ಸೂರ್ಯನ ಸಮೀಪ ಬಂದು ಹೋಗುತ್ತದೆ. ಉಳಿದ ಎರಡು ಧೂಮಕೇತುಗಳಲ್ಲಿ ಅಟ್ಲಸ್ ಭಾರಿ ವಿಶೇಷ. ಅದು ಲೆಮನ್ ಹಾಗೂ ಸ್ವಾನ್ ಧೂಮಕೇತುಗಳಂತೆ ಸೌರವ್ಯೂಹದ ಊರ್ಸ್ ಕ್ಲೌಡ್ನಿಂದ ಬಂದುದಲ್ಲ. ಸೌರವ್ಯೂಹದ ಹೊರಗಿನಿಂದ ಅನಂತ ಆಕಾಶದಿಂದ ಬಂದಿದೆ ಎನ್ನಲಾಗುತ್ತದೆ. ಹೀಗಾಗಿ ಅದರ ಅಧ್ಯಯನ ಹೊಸ ಹೊಸ ವಿಚಾರಗಳನ್ನು ಒದಗಿಸುತ್ತಿದೆ. ಅದರಲ್ಲಿರುವ ಖನಿಜಗಳು ವಿಶ್ವ ಸೃಷ್ಟಿಯ ಅಧ್ಯಯನಕ್ಕೂ ಹೊಸ ಆಯಾಮ ಕೊಡುತ್ತಿದೆ ಎನ್ನುತ್ತಾರೆ ಡಾ. ಎ.ಪಿ. ಭಟ್.
ಆಕಾಶದಲ್ಲಿ ರಾತ್ರಿಯಲ್ಲಿ ಕಾಣುವ ಚಂದ್ರನನ್ನು ಬಿಟ್ಟರೆ ಧೂಮಕೇತುಗಳೂ ಬಲುಚೆಂದ. ಸೂರ್ಯನ ಸಮೀಪದಲ್ಲಿರುವಾಗ ಉದ್ದುದ್ದ ಬಾಲ ಬೆಳೆಸಿಕೊಂಡು ವೀಕ್ಷಕರ ಮನ ಸೂರೆಗೊಳ್ಳುತ್ತವೆ. ಈ ಧೂಮಕೇತುಗಳೊಂದಿಗೆ ಪ್ರತಿವರ್ಷವೂ ಇದೇ ಸಮಯದಲ್ಲಿ ಗೋಚರಿಸುವ ಹ್ಯಾಲಿ, ಧೂಮಕೇತುವಿನ ಉಲ್ಕಾಪಾತವು ಅಮಾವಾಸ್ಯೆಯ ಕತ್ತಲ ಆಕಾಶವನ್ನು ರಂಗೇರಿಸಲಿದೆ. ಆಕಾಶಕಾಯದ ಕೌತುಕ ವೀಕ್ಷಿಸಬೇಕು. | ಡಾ. ಎ.ಪಿ. ಭಟ್. ಭೌತಶಾಸ್ತ್ರಜ್ಞ, ಉಡುಪಿ