ಗಂಗಾವತಿ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಡ್ರೀಮ್‌ವರ್ಲ್ಡ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ಆಯೋಜಿಸಿರುವ 6ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್‌ಗೆ ಹಾಸ್ಯ ಭಾಷಣಕಾರ, ಗಂಗಾವತಿ ಬೀಚಿ ಬಿ.ಪ್ರಾಣೇಶ ಚಾಲನೆ ನೀಡಿದರು. ಟ್ರಸ್ಟ್ ಕಾರ್ಯದರ್ಶಿ ಶಿಹಾನ್ ಜಬೀವುಲ್ಲಾ, ಖುಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಆನಂದ ಕೊಟ್ರಪ್ಪ ಅಕ್ಕಿ ಇತರರಿದ್ದರು. 
ಜಿಲ್ಲೆ

ಆತ್ಮರಕ್ಷಣೆ ಜತೆಗೆ ಆತ್ಮವಿಶ್ವಾಸ ವೃದ್ಧಿಸುವ ಕರಾಟೆ; ಗಂಗಾವತಿ ಬೀಚಿ ಪ್ರಾಣೇಶ ಹೇಳಿಕೆ

ಗಂಗಾವತಿ: ಬಾಲಕಿಯರಿಗೆ ಕರಾಟೆ ಕಲಿಕೆ ಪೂರಕವಾಗಿದ್ದು, ಆತ್ಮರಕ್ಷಣೆ ಜತೆಗೆ ಆತ್ಮ ವಿಶ್ವಾಸವೂ ಹೆಚ್ಚಲಿದೆ ಎಂದು ಹಾಸ್ಯ ಭಾಷಣಕಾರ, ಗಂಗಾವತಿ ಬೀಚಿ ಬಿ.ಪ್ರಾಣೇಶ ಹೇಳಿದರು.

ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಡ್ರೀಮ್‌ವರ್ಲ್ಡ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ಆಯೋಜಿಸಿರುವ 6ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್‌ಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಪುರಾತನ ಕಾಲದಿಂದಲೂ ಕರಾಟೆ ಕಲೆ ಪ್ರಚಲಿತದಲ್ಲಿದ್ದು, ದೈಹಿತ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಲಿದೆ. ದೇಸಿ ಕ್ರೀಡೆಗಳತ್ತ ವಿದ್ಯಾರ್ಥಿಗಳು ಗಮನಹರಿಸಬೇಕಿದ್ದು, ಅಧ್ಯಯನ ಮತ್ತು ಆಟಗಳಿಗೆ ಸಮಾನ ರೀತಿಯಲ್ಲಿ ಸಮಯ ನೀಡಬೇಕಿದೆ. ಎಲ್ಲ ಶಾಲೆಗಳಲ್ಲೂ ಕರಾಟೆ ಕಲೆ ಕಲಿಸಲಾಗುತ್ತಿದ್ದು, ಪಾಲಕರು ಮಕ್ಕಳಿಗೆ ಕರಾಟೆ ಕಲಿಕೆಗೆ ಪ್ರೇರಣೆ ನೀಡುವಂತೆ ಸಲಹೆ ನೀಡಿದರು.

ಟ್ರಸ್ಟ್ ಕಾರ್ಯದರ್ಶಿ ಶಿಹಾನ್ ಜಬೀವುಲ್ಲಾ ಮಾತನಾಡಿ, ಹಲವು ವರ್ಷಗಳಿಂದ ಶಾಲಾ ಮಕ್ಕಳಿಗೆ ಕರಾಟೆ ಕಲಿಸಲಾಗುತ್ತಿದ್ದು, ಸ್ಪರ್ಧೆ ಆಯೋಜಿಸುವ ಮೂಲಕ ಅನ್ಯರಾಜ್ಯಗಳ ಕರಾಟೆಪಟುಗಳನ್ನು ನಗರಕ್ಕೆ ಆಹ್ವಾನಿಸಲಾಗುತ್ತಿದೆ. ಹಿರಿಯ ತರಬೇತುದಾರರ ಮಾರ್ಗದರ್ಶನದಿಂದ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್ ಆಯೋಜಿಸಲು ನೆರವಾಗಿದೆ ಎಂದರು.

ಎರಡು ದಿನಗಳ ಸ್ಪರ್ಧೆಯಲ್ಲಿ ಐದು ರಾಜ್ಯಗಳು ಮತ್ತು 20 ಜಿಲ್ಲೆಗಳ 800ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷ ಶಿಹಾನ್ ಸೈಯ್ಯದ್ ಬಿಲಾಲ್, ಖುಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಆನಂದ ಕೊಟ್ರಪ್ಪ ಅಕ್ಕಿ, ಮುಖಂಡ ವಿಠ್ಠಲನಾವಡೆ, ಉಪನ್ಯಾಸಕಿ ಎನ್.ಭಾರತಿ, ತರಬೇತುದಾರರಾದ ರಜಾಕ್, ಅಣ್ಣಪ್ಪ ಮರಕಟ್, ಎ.ಝಡ್. ಮೋಹಿದ್, ಅರವಿಂದ ನಾಯ್ಕ, ಮರಿಸ್ವಾಮಿ, ಕಲ್ಯಾಣಕುಮಾರ, ಭಾಷುಸಾಬ್, ಸುವರ್ಣ ಉಡುಪಿ, ಪತ್ರಕರ್ತ ಬಿ.ದೇವರಾಜ್ ಇತರರಿದ್ದರು.