ಜಿಲ್ಲೆ

ಜನರನ್ನು ನಗೆಗಡಲ್ಲಿ ತೇಲಿಸಿದ ಹಾಸ್ಯ ಸಂಜೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಇಲ್ಲಿನ ಕಡಪಾ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ ಹಾಗೂ ತಂಡದವರು ಹಾಸ್ಯಭರಿತ ಮಾತುಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

ವೈದ್ಯರ ಕಾರ್ಯವೈಖರಿ ಕುರಿತು ಹಾಸ್ಯ ಚಟಾಕಿ ಮೂಲಕ ಹಾಸ್ಯ ಸಂಜೆ ಆರಂಭಿಸಿದ ಪ್ರಾಣೇಶ, ದೇಶದಲ್ಲಿನ ವಿವಿಧ ಕಡೆಗಳಲ್ಲಿನ ಆಶ್ವರ್ಯಕರ ಹಾಗೂ ವಿಭಿನ್ನವಾಗಿರುವ ಗ್ರಾಮಗಳ ಹೆಸರಿನ ಹಾಸ್ಯಗಳನ್ನು ಹೇಳುವ ಮೂಲಕ ಜನರನ್ನು ನಗಿಸಿದರು. ತಮ್ಮ ಹಾಸ್ಯದ ಮೂಲಕವೇ ಸಮಾಜ ಸುಧಾರಣೆ ಸೇರಿ ಇತರ ಸಂದೇಶಗಳನ್ನು ನೀಡಿದ್ದು ವಿಶೇಷವಾಗಿತ್ತು. ಇವರ ಜತೆಗೆ ಆಗಮಿಸಿದ್ದ ಬಸವರಾಜ ಮಹಾಮನಿ, ನರಸಿಂಹ ಜೋಶಿ ಹಾಗೂ ಮಹಾದೇವ ಸತ್ತಿಗೇರಿ ಸಹ ತಮ್ಮದೇ ದಾಟಿಯ ಹಾಸ್ಯಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದರು.

ಇದಕ್ಕೂ ಪೂರ್ವದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮವನ್ನು ಮೇಯರ್​ ರಾಮಪ್ಪ ಬಡಿಗೇರ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ಧಾರವಾಡದ ಅನೇಕರು ಕೊಡುಗೆ ನೀಡಿದ್ದಾರೆ. ಅವರನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ. ನಾಡು, ನುಡಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಅವರು, ಮಹಾನಗರ ಪಾಲಿಕೆ ಅನೇಕ ಅಭಿವೃದ್ಧಿ ಕಾರ್ಯಗಳ ಜತೆಗೆ ಸ್ವಚ್ಛತೆಗೂ ಆದ್ಯತೆ ನೀಡಿದೆ ಎಂದರು.

ವಿಪಕ್ಷ ನಾಯಕ ರಾಜು ಕಮತಿ ಮಾತನಾಡಿ, ನಗರದಲ್ಲಿ ಪ್ರತಿ ಅಂಗಡಿಗಳ ನಾಮಫಲಕಗಳು ಕನ್ನಡದಲ್ಲೇ ಇರುವಂತೆ ಆದೇಶ ಇದ್ದರೂ ಬಹುತೇಕ ಅಂಗಡಿಗಳು ಪಾಲಿಸಿಲ್ಲ. ಅವುಗಳನ್ನು ಬದಲಿಸುವ ಕೆಲಸ ಮಾಡಬೇಕು. ಕನ್ನಡಾಭಿಮಾನ ನವೆಂಬರ್​ ತಿಂಗಳಲ್ಲಿ ಮಾತ್ರ ಇದ್ದರೆ ಸಾಲದು. ಸದಾ ನಮ್ಮಲ್ಲಿ ಜಾಗೃತವಾಗಿದ್ದಾಗಲೇ ಕನ್ನಡ ಉಳಿಸಿ, ಬೆಳೆಸಲು ಸಾಧ್ಯ ಎಂದರು.

ಉಪಮೇಯರ್​ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ಮಂಜುನಾಥ ಬಟ್ಟೆಣ್ಣವರ, ವಿಷ್ಣುತಿರ್ಥ ಕೊರ್ಲಹಳ್ಳಿ, ಅನಿತಾ ಚಳಗೇರಿ, ಜ್ಯೋತಿ ಪಾಟೀಲ, ಸುರೇಶ ಬೇದರೆ, ಕವಿತಾ ಕಬ್ಬೇರ, ಶಂಕರ ಶೇಳಕೆ, ದೀಪಾ ನೀರಲಕಟ್ಟಿ, ಶಂಭು ಸಾಲಮನಿ, ಚಂದ್ರಕಲಾ ಕೊಟಬಾಗಿ, ಆನಂದ ಯಾವಗಲ್ಲ, ನೀಲವ್ವ ಅರವಳದ, ಇತರರು ಇದ್ದರು.

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.