ಜಿಲ್ಲೆ

ಒಮ್ಮೆ ಸಂಘದ ಬೈಠಕ್‌ಗೆ ಬನ್ನಿ

ಹಾಸನ: ಸಂಘದ ಶತಾಬ್ಧಿ ವರ್ಷಾಚರಣೆ ನಡೆಯುತ್ತಿದೆ. ನಾನು ಸ್ವಯಂ ಸೇವಕ, ಸಂಘದಿಂದಲೇ ಶಿಕ್ಷಣ ಪಡೆದಿದ್ದೇನೆ. ಪ್ರಿಯಾಂಕ್ ಖರ್ಗೆ ಅವರು ಯಾರೋ ಮೂರನೇ ವ್ಯಕ್ತಿ ನೀಡಿದ ತಪ್ಪು ಮಾಹಿತಿಯನ್ನು ಆಧರಿಸಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನೀವು ಮಲ್ಲಿಕಾರ್ಜುನ ಖರ್ಗೆ ಪುತ್ರ, ಸಚಿವರಾಗಿದ್ದೀರಿ. ಆರ್‌ಎಸ್‌ಎಸ್ ಬಗ್ಗೆ ಮಾತನಾಡಬೇಕೆಂದರೆ ಮೊದಲು ಸಂಘದ ಒಂದು ಬೈಠಕ್‌ಗೆ ಬನ್ನಿ. ಪರಿಚಯ ವರ್ಗದಲ್ಲಿ ಪಾಲ್ಗೊಳ್ಳಿ. ಅಲ್ಲಿ ಸಂಘ, ಸ್ವಯಂ ಸೇವಕ, ಪ್ರಚಾರಕರು, ವ್ಯವಸ್ಥೆ, ವ್ಯಕ್ತಿ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣ ಎಂದರೇನು ಎಂಬುದನ್ನು ಅರಿತುಕೊಳ್ಳಿ ಎಂದರು.

ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ರಾಜಕೀಯ ಉದ್ದೇಶವಷ್ಟೇ. ಈ ಸಂದರ್ಭದಲ್ಲಿ ಹೇಳಿಕೆ ಕೊಟ್ಟರೆ ನಾನು ಹೈಲೆಟ್ ಆಗುತ್ತೇನೆ ಎಂದು ಮಾತನಾಡಬೇಡಿ. ಇದು ರಾಜಕೀಯ ಪಕ್ಷವಲ್ಲ, ಸಂಘಟನೆಯಾಗಿದೆ. ರಾಜಕೀಯಕ್ಕೆ ಇದನ್ನು ತರಬೇಡಿ. ಯಾವುದೇ ಅಧಿಕಾರಿ ಹೋಗಬಾರದು ಅಂತಾ ಹೇಳ್ತೀರಾ? ನಾನು ಸ್ವತಃ ಎನ್‌ಜಿಒ ನಡೆಸುತ್ತೀನಿ. ಶಾಲೆಗಳಲ್ಲಿ ಆರೋಗ್ಯ ಶಿಬಿರ ಮಾಡುತ್ತೇವೆ. ಹಾಗಾದರೆ ಅದೂ ತಪ್ಪೇ. ಜನರ ಹಿತಕ್ಕಾಗಿ ನಡೆಯುವ ಕಾರ್ಯಕ್ರಮಗಳಿಗೆ ತಡೆ ನೀಡುವುದು ಸರಿಯಲ್ಲ ಎಂದರು.