ವಿಕ್ರಮ ನಾಡಿಗೇರ ಧಾರವಾಡ
ಶೈಕ್ಷಣಿಕ ನಗರಿ ಧಾರವಾಡದ ಗ್ರಾಮೀಣ, ಕೇಂದ್ರ ಬಸ್ ನಿಲ್ದಾಣಗಳು ಅಭಿವೃದ್ಧಿ ಕಂಡಿವೆ. ಆದರೆ, ಹೃದಯಭಾಗದಲ್ಲಿನ, ನಿತ್ಯ ಹೆಚ್ಚಿನ ಜನರು ಸಂಚಾರ ನಡೆಸುವ ನಗರ ಸಾರಿಗೆ (ಸಿಬಿಟಿ) ಬಸ್ ನಿಲ್ದಾಣಕ್ಕೆ ಮಾತ್ರ ಅಭಿವೃದ್ಧಿ ಭಾಗ್ಯ ಸಿಕ್ಕಿಲ್ಲ.
ನಿಲ್ದಾಣದ ರಸ್ತೆ ಅವ್ಯವಸ್ಥೆ, ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಲೇ ಇದ್ದಾರೆ. ನಗರದ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಬಸ್ಗಳ ಮುಖ್ಯ ತಂಗುದಾಣ ಇದಾಗಿದೆ.
ಇಲ್ಲಿಂದ ಪಾವಟೆನಗರ, ಸಪ್ತಾಪುರ, ಮಾಳಾಪುರ, ರೈಲ್ವೆಸ್ಟೇಶನ್, ತೇಜಸ್ವಿನಗರ, ಕೃಷಿ ವಿಶ್ವವಿದ್ಯಾಲಯ ಸೇರಿ ಬಹುತೇಕ ಬಡಾವಣೆಗಳಿಗೆ ಇಲ್ಲಿಂದಲೇ ಬಸ್ ಸಂಚರಿಸುತ್ತವೆ. ನಿತ್ಯ ವ್ಯಾಪಾರ, ಶಿಕ್ಷಣ, ಆಸ್ಪತ್ರೆ ಹೀಗೆ ವಿವಿಧ ಕಾರಣಗಳಿಗೆ ನೂರಾರು ಜನರು ಓಡಾಡುತ್ತಾರೆ. ಆದಾಗ್ಯೂ ಪ್ರಯಾಣಿಕರಿಗೆ ಬೇಕಾದ ಕನಿಷ್ಠ ಸೌಲಭ್ಯವೂ ಇಲ್ಲವಾಗಿದೆ.
ಸುಮಾರು ವರ್ಷಗಳಿಂದ ನಿಲ್ದಾಣದ ಆವರಣದಲ್ಲಿ ಡಾಂಬರೀಕರಣ ಆಗಿಲ್ಲ. ಕೆಲ ದಿನಗಳಿಂದ ತಗ್ಗು- ಗುಂಡಿಗಳನ್ನು ಮುಚ್ಚಲು ತೇಪೆ ಹಚ್ಚುವ ಕೆಲಸವಾಗಿದ್ದರೂ, ನಿರಂತರ ಮಳೆಯಿಂದ ಹೊಂಡಗಳು ನಿರ್ವಣವಾಗಿವೆ. ಈ ಹೊಂಡದ ನೀರಿನಲ್ಲೇ ಸಾಗಿ ಬಸ್ ಹತ್ತುವಂತಹ ಸ್ಥಿತಿ ನಿರ್ವಣವಾಗಿದೆ.
ಕೆಲ ಸಂದರ್ಭಗಳಲ್ಲಿ ತಾಸುಗಟ್ಟಲೆ ಬಸ್ಗೆ ಕಾಯುವ ಸ್ಥಿತಿ ಎದುರಾಗುತ್ತದೆ. ಆಗ ಪ್ರಯಾಣಿಕರು ಕುಳಿತುಕೊಳ್ಳಲು ಆಸನಗಳ ಸೂಕ್ತ ವ್ಯವಸ್ಥೆಯೂ ಇಲ್ಲ. ಶುದ್ಧ ಕುಡಿಯುವ ನೀರಿಲ್ಲ. ಸಿಬಿಟಿ ಆವರಣದಲ್ಲೇ ಶೌಚ ಮಾಡುವುದರಿಂದ ದುರ್ನಾತ ಸಾಮಾನ್ಯವಾಗಿದೆ. ಹಸು, ನಾಯಿಗಳು ನಿಲ್ದಾಣದ ಎಲ್ಲೆಂದರಲ್ಲಿ ಠಿಕಾಣಿ ಹೂಡಿದರೂ ಕೇಳುವವರಿಲ್ಲ. ಹೀಗೆ, ಅನೇಕ ಇಲ್ಲಗಳ ಮಧ್ಯೆಯೇ ಪ್ರಯಾಣಿಕರು ಸಂಚಾರ ನಡೆಸುವ ಸ್ಥಿತಿ ನಿರ್ವಣವಾಗಿದೆ.
ಯಾವ ಪ್ರದೇಶದ ಬಸ್ಗಳು ಎಲ್ಲಿ ನಿಲ್ಲಲಿವೆ ಎಂಬುದು ನಿತ್ಯ ಸಂಚರಿಸುವ ಜನರಿಗೆ ಮಾತ್ರ ಗೊತ್ತು. ಪರ ಊರಿನಿಂದ ಬರುವ ಪ್ರಯಾಣಿಕರ ಅನುಕೂಲಕ್ಕೆ ಒಂದು ಫಲಕವೂ ಇಲ್ಲ. ಬಸ್ ನಿಲುಗಡೆ ಸ್ಥಳ ಕಂಡುಹಿಡಿಯವಲ್ಲಿಯೇ ಬಹಳ ಸಮಯ ಕಳೆಯುವಂತಹ ದುಃಸ್ಥಿತಿ ಇದೆ.
ಕೆಲ ವರ್ಷಗಳ ಹಿಂದಷ್ಟೇ ಕೋಟ್ಯಂತರ ರೂಪಾಯಿ ವ್ಯಯಿಸಿ ಹುಬ್ಬಳ್ಳಿ ಸಿಬಿಟಿ ನವೀಕರಿಸಿ ಮೇಲ್ದರ್ಜೆಗೇರಿಸಲಾಗಿದೆ. ಆಗ ಧಾರವಾಡ ಸಿಬಿಟಿ ಸಹ ಅಭಿವೃದ್ಧಿಯಾಗಲಿದೆ ಎಂಬ ಕನಸು ಜನರಲ್ಲಿತ್ತು. ಆದರೆ, ಮೇಲ್ದರ್ಜೆಗೆ ಏರಿಸುವುದಿರಲಿ ಅಗತ್ಯ ಮೂಲ ಸೌಕರ್ಯ ನೀಡುವಲ್ಲಿ ಸಹ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.
ಖಾಸಗಿ ವಾಹನಗಳ ಕಿರಿಕಿರಿ
ಸಿಬಿಟಿ ಬಳಿಯೇ ಆಟೋ ನಿಲ್ದಾಣ ಇದ್ದರೂ ಆಟೋಗಳು ಹೆಚ್ಚಾಗಿ ಕಾಣುವುದು ಸಿಬಿಟಿಯಲ್ಲೇ. ಮಾಳಾಪುರ, ಮದಿಹಾಳ ಸೇರಿ ಇನ್ನೂ ಕೆಲ ಪ್ರದೇಶಗಳಿಗೆ ಸೀಟ್ ಲೆಕ್ಕದಲ್ಲಿ ಆಟೋ ಸಂಚರಿಸುತ್ತವೆ. ಇದೇ ಕಾರಣಕ್ಕೆ ಸಾರಿಗೆ ಚಾಲಕರು ಹಾಗೂ ಆಟೋ ಚಾಲಕರ ಮಧ್ಯೆ ಸಾಕಷ್ಟು ಬಾರಿ ವಾಗ್ವಾದವೂ ನಡೆದಿವೆ.
ನಿರಂತರವಾಗಿ ಸುರಿದ ಮಳೆಯಿಂದ ಸಿಬಿಟಿಯಲ್ಲಿ ಸಾಕಷ್ಟು ಹೊಂಡಗಳು ಉದ್ಭವಿಸಿವೆ. ಆ ಹೊಂಡಗಳಲ್ಲೇ ಸಾಗಿ ಬಸ್ ಹತ್ತಬೇಕು. ಅಭಿವೃದ್ಧಿ ಜಪ ಮಾಡುತ್ತಿರುವ ಜನಪ್ರತಿನಿಧಿಗಳಿಗೆ ಈ ಅವ್ಯವಸ್ಥೆ ಕಾಣಿಸುತ್ತಿಲ್ಲ ಎನಿಸುತ್ತದೆ. ಆಸನ, ನೀರಿನ ವ್ಯವಸ್ಥೆ ಇಲ್ಲ. ನಿತ್ಯ ನೂರಾರು ಜನ ಸಂಚರಿಸುವ ನಿಲ್ದಾಣದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. - ಶ್ರೀಕಾಂತ ಎಸ್., ಪ್ರಯಾಣಿಕ