ಜಿಲ್ಲೆ

ನಾಗಶೆಟ್ಟಿಕೊಪ್ಪ ಕೆರೆ ದುಸ್ಥಿತಿ ನೋಡ ಬನ್ನಿ

Dharwad

ಹುಬ್ಬಳ್ಳಿ: ಕೇಶ್ವಾಪುರ ನಾಗಶೆಟ್ಟಿಕೊಪ್ಪ ಕೆರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಆದರೆ, ಅದು ಇತ್ತೀಚೆಗೆ ದಯನೀಯ ಸ್ಥಿತಿಗೆ ತಲುಪಿದೆ. ಅಭಿವೃದ್ಧಿಗೆ ಹಣದ ಕೊರತೆ ಇಲ್ಲ, ಜಲಸಂರಕ್ಷಣೆಗೆ ಆದ್ಯತೆ ನೀಡಿದ್ದೇವೆ ಎಂದು ಹೇಳಿಕೊಳ್ಳುವವರು ಈ ಕೆರೆಯ ದುಸ್ಥಿತಿಯನ್ನೊಮ್ಮೆ ನೋಡಬೇಕು.

ಕೆರೆಯಲ್ಲಿ ನೀರು ಇಲ್ಲವೆಂಬಂತೆ ಗಿಡಗಂಟಿಗಳು ಬೆಳೆದು ನಿಂತಿವೆ. ಅಲ್ಲಲ್ಲಿ 8-10 ಅಡಿ ಎತ್ತರದಷ್ಟು ಗಿಡಗಳನ್ನು ಕಾಣಬಹುದು. ಕೆರೆಯ ಸುತ್ತ ತಡೆಗೋಡೆಯೇ ಇಲ್ಲ. ಸುತ್ತಮುತ್ತಲೂ ಜನ ವಸತಿ ಇದೆ. ಹಾಗಾಗಿ ನಿತ್ಯವೂ ಕಸದ ರಾಶಿ ಕೆರೆಯ ಒಡಲು ಸೇರುತ್ತಿದೆ. ಪಾಲಿಕೆ, ಚುನಾಯಿತ ಪ್ರತಿನಿಧಿಗಳೇ ನಿರ್ಲಕ್ಷ್ಯ ತೋರಿರುವಾಗ ಜನರು ಕಾಳಜಿ ವಹಿಸಲು ಹೇಗೆ ಸಾಧ್ಯ?

ಮಾಜಿ ಮುಖ್ಯಮಂತ್ರಿ, ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ನಿವಾಸಕ್ಕೆ ಹತ್ತಿರದಲ್ಲಿಯೇ ಈ ಕೆರೆ ಇದೆ. ಕಳೆದ 7-8 ವರ್ಷಗಳಲ್ಲಿ ನಗರದ ಉಣಕಲ್ ಕೆರೆ, ತೋಳನಕೆರೆಗೆ ಅಭಿವೃದ್ಧಿ ಹೆಸರಲ್ಲಿ 2ನೇ ಬಾರಿ ಕೋಟಿ ಕೋಟಿ ರೂ. ಸುರಿಯಲಾಗುತ್ತಿದೆ. ಆದರೆ, ನಾಗಶೆಟ್ಟಿಕೊಪ್ಪ ಕೆರೆಗೆ ಕನಿಷ್ಠ ಮರ್ಯಾದೆಯನ್ನೂ ಕೊಟ್ಟಿಲ್ಲ. ಏನೂ ಮಾಡುವುದಿಲ್ಲ ಎನ್ನುವುದಾದರೆ ನಾಗಶೆಟ್ಟಿಕೊಪ್ಪ ಕೆರೆಯನ್ನು ಮುಚ್ಚಿಬಿಡಿ ಎನ್ನುವಷ್ಟರ ಮಟ್ಟಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಿರ್ಲಕ್ಷ್ಯ್ಕೆ ಒಳಗಾಗಿರುವ ಕೆರೆಯು ಹಾವು, ಚೇಳು, ಮುಂಗುಸಿಗಳ ವಾಸಸ್ಥಳವಾಗಿದೆ. ಸೊಳ್ಳೆಯ ಕಾಟ ವಿಪರೀತವಾಗಿದೆ. ಚಿಕೂನ್​ಗುನ್ಯಾ, ಡೆಂಘೆ ಕಾಯಿಲೆಗೆ ಹೇಳಿ ಮಾಡಿಸಿದ ವಾತಾವರಣ. ಗಬ್ಬು, ದುರ್ನಾತದಿಂದಾಗಿ ಮನೆಯಿಂದ ಹೊರಗೆ ಬರುವ ಸ್ಥಿತಿ ಇಲ್ಲ. ಕೆರೆ ದಂಡೆಯ ಮೇಲೆ ಬಡವರು, ಕೂಲಿ ಕೆಲಸ ಮಾಡುವವರು ಜೀವನ ನಡೆಸುತ್ತಾರೆ. ಇಂಥವರು ವೋಟ್ ಹಾಕದಿದ್ದರೂ ಗೆಲ್ಲುತ್ತೇವೆ ಎಂದು ಚುನಾಯಿತ ಪ್ರತಿನಿಧಿಗಳು ತಿಳಿದುಕೊಂಡಂತಿದೆ. ಕಳೆದ ಅವಧಿಗೆ ಬಿಜೆಪಿಯ ಮೇನಕಾ ಹುರುಳಿ ಪಾಲಿಕೆ ಸದಸ್ಯೆಯಾಗಿದ್ದರು. ಒಮ್ಮೆ ಅವರು ಉಪ ಮೇಯರ್ ಸಹ ಆಗಿದ್ದರು.

‘ನಾಗಶೆಟ್ಟಿಕೊಪ್ಪ ಕೆರೆ ಅಂದಾಜು 2 ಎಕರೆ ವಿಸ್ತಾರವಾಗಿದೆ. 700 ವರ್ಷಗಳ ಇತಿಹಾಸವಿದೆ. ನಾವು ಚಿಕ್ಕವರಿದ್ದಾಗ 40-45 ವರ್ಷಗಳ ಹಿಂದೆ ಇದೇ ಕೆರೆಯ ನೀರಿನಲ್ಲಿ ಜಳಕ ಮಾಡುತ್ತಿದ್ದೆವು. ಆಗ, ಮನೆ ಮನೆಗೆ ನಲ್ಲಿಯ ಸಂಪರ್ಕ ಇರಲಿಲ್ಲ. ಗುಬ್ಬಿ ವೀರಣ್ಣ ಕಂಪನಿಯ ನಾಟಕ ಕೆರೆ ಪಕ್ಕದ ಶ್ರೀ ಮಾರುತಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿತ್ತು. ಆಗ ನಾಟಕ ತಂಡದಲ್ಲಿದ್ದ ಡಾ. ರಾಜಕುಮಾರ, ನರಸಿಂಹರಾಜು ಅವರಂಥ ಕಲಾವಿದರು ಈ ಕೆರೆಯ ದಂಡೆಯ ಮೇಲೆ ಜಳಕ ಮಾಡಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಸ್ಥಳೀಯರಾದ ಪೀರಾಜಿ ಖಂಡೇಕರ.

ಮುಖ್ಯ ರಸ್ತೆಯಲ್ಲಿ ತಗ್ಗು ಗುಂಡಿ

ಕೇಶ್ವಾಪುರ ರಮೇಶ ಭವನದಿಂದ ಬೆಂಗೇರಿ-ಗೋಪನಕೊಪ್ಪ ಬಸ್ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹದಗೆಟ್ಟಿದೆ. ಅಲ್ಲಲ್ಲಿ ತಗ್ಗು-ಗುಂಡಿಗಳನ್ನು ಕಾಣಬಹುದು. ಮುಖ್ಯರಸ್ತೆಗೆ ಗಟಾರ ವ್ಯವಸ್ಥೆಯೇ ಸರಿಯಾಗಿಲ್ಲ. ಪ್ರಸ್ತಾವಿತ ಸಿಸಿ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯ ತಗ್ಗು-ಗುಂಡಿಗೆ ತೇಪೆ ಹಾಕುವ ತಾತ್ಕಾಲಿಕ ಕೆಲಸವನ್ನಷ್ಟೇ ಪಾಲಿಕೆ ಮಾಡುತ್ತಿದೆ. ಈ ರಸ್ತೆಯಲ್ಲಿ ನಿತ್ಯ ಒಂದಲ್ಲ ಒಂದು ಕಡೆ ಒಳಚರಂಡಿ ಉಕ್ಕಿ ಹರಿಯುತ್ತಿರುತ್ತದೆ. ಇಲ್ಲೂ ಸಹ ತಾತ್ಕಾಲಿಕ ಕೆಲಸ. ಸರಿಪಡಿಸಿ ಹೋದ ಕೆಲವೇ ಗಂಟೆಗಳಲ್ಲಿ ಯುಜಿಡಿ ಉಕ್ಕಿ ಹರಿಯುವುದು ಸಾಮಾನ್ಯ.

ಉದಯನಗರ, ವೆಂಕಟೇಶ ಕಾಲನಿ, ಚರ್ಚ್ ಹಿಂಭಾಗದಲ್ಲಿ ಒಳರಸ್ತೆಗಳು ತಕ್ಕಮಟ್ಟಿಗೆ ಇದೆ. ಇತ್ತೀಚೆಗೆ ಸಿಮೆಂಟ್ ರಸ್ತೆಗಳನ್ನು ನಿರ್ವಿುಸಲಾಗಿದೆ. ಆದರೆ, ಗುಣಮಟ್ಟದ ಬಗ್ಗೆ ಆಕ್ಷೇಪಗಳಿವೆ. ಬೆಂಗೇರಿ, ಉದಯನಗರ, ಗೋಪನಕೊಪ್ಪದ ಕೆಲ ಭಾಗ ನಿರಂತರ ನೀರು ಯೋಜನೆ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ, ದಿನದ 24 ಗಂಟೆ ನೀರು ಪೂರೈಕೆಯಾಗುವುದಿಲ್ಲ. ನಿತ್ಯ ಒಮ್ಮೆ ನೀರು ಬರುತ್ತದೆ. ಬಿಲ್ ತುಂಬಿದರೂ ಬಾಕಿ ಎಂದು ನಮೂದಿಸಿ ಜಲ ಮಂಡಳಿಯು ಬಳಕೆದಾರರನ್ನು ಕಾಡುತ್ತದೆ.

ಬೆಂಗೇರಿ ಮುಖ್ಯ ರಸ್ತೆ ಬಳಿಯ ವೆಂಕಟೇಶ ಕಾಲನಿ ಕ್ರಾಸ್​ನಲ್ಲಿ ಯುಜಿಡಿ ಉಕ್ಕಿ ಹರಿಯುತ್ತದೆ. ಪಾಲಿಕೆಯವರು ಬೆಳಗ್ಗೆ ಸರಿಪಡಿಸಿದರೆ ಸಂಜೆ ವೇಳೆ ಮತ್ತೆ ಯಥಾಸ್ಥಿತಿ. ಯುಜಿಡಿ ತೆರೆದುಕೊಂಡಿರುವುದರಿಂದ ಮಕ್ಕಳು ಮನೆಯ ಹೊರಗೆ ಆಟವಾಡುವ ಹಾಗಿಲ್ಲ.| ರಮೇಶ ಖಟಾವಕರ
ಬೆಂಗೇರಿಯಲ್ಲಿ ಕಸ ಸಂಗ್ರಹಕ್ಕೆ ದಿನಾಲೂ ಪಾಲಿಕೆ ಸಿಬ್ಬಂದಿ ಮನೆ ಮನೆಗೆ ಬರುವುದಿಲ್ಲ. ಕೆಲವೊಮ್ಮೆ ಮಷಿನ್ ಹಿಡಿದು (ಆರ್​ಎಫ್​ಐಡಿ) ಮನೆಯ ಮುಂದೆ ಬಂದು ಹೋಗುತ್ತಾರೆ. ಕಸ ತೆಗೆದುಕೊಳ್ಳುವ ವಾಹನ ಪ್ರತಿ ಮನೆಯ ಬಳಿ ಬರುವುದಿಲ್ಲ.| ಶಂಕರ ಸೂಳಿಕೆರೆ
ಕೆರೆ(ನಾಗಶೆಟ್ಟಿಕೊಪ್ಪ)ಗೆ ತಡೆಗೋಡೆಯೇ ಇಲ್ಲ. ನಾವು ಇಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಬೇಕು. ಚಿಕ್ಕ ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸುವ ಹಾಗಿಲ್ಲ.| ಇಮಾಂಬಿ ಬೇಪಾರಿ
ನಾಗಶೆಟ್ಟಿಕೊಪ್ಪ ಕೆರೆಯಲ್ಲಿ ಗಿಡಗಂಟಿ ಬೆಳೆದು ನಿಂತಿವೆ. ಹಾವು, ಚೇಳು, ಮುಂಗುಸಿ ಓಡಾಡುತ್ತಿರುತ್ತವೆ. ಸೊಳ್ಳೆ ಕಾಟ ವಿಪರೀತವಾಗಿದೆ. ಚಿಕೂನ್​ಗುನ್ಯಾ, ಡೆಂಘೆ ಕಾಯಿಲೆ ಇಲ್ಲಿ ಸಾಮಾನ್ಯ. | ಮಾಸಾಂಬಿ ಬೇಪಾರಿ
ಪಾಲಿಕೆಯ ಸಾಮಾನ್ಯ ನಿಧಿ 92 ಲಕ್ಷ ರೂ. ವೆಚ್ಚದಲ್ಲಿ ಬೆಂಗೇರಿ ಮುಖ್ಯರಸ್ತೆಯ ಯುಜಿಡಿ ಕಾಮಗಾರಿ ಕಾರ್ಯಾದೇಶದ ಹಂತದಲ್ಲಿದೆ. ಅದಕ್ಕೂ ಪೂರ್ವ ಗದಗ ರಸ್ತೆ-ಕೇಶ್ವಾಪುರ ಸವೋದಯ ವೃತ್ತ-ಗೋಪನಕೊಪ್ಪ-ಸಾಯಿನಗರ-ಉಣಕಲ್ಲ ಮಾರ್ಗದ ಕಾಂಕ್ರೀಟ್ ರಸ್ತೆ ಕಾಮಗಾರಿ ಇದೇ ಮಾರ್ಗದಲ್ಲಿ ಹಾದು ಹೋಗಬೇಕಿದೆ. ನಾಗಶೆಟ್ಟಿಕೊಪ್ಪ ಕೆರೆಗೆ ತಡೆಗೋಡೆ ನಿರ್ವಿುಸುವ ಕಾಮಗಾರಿ ಅರ್ಧ ಆಗಿದೆ. ಕೆರೆ ಹೂಳೆತ್ತುವ ಕೆಲಸ ಕೈಗೆತ್ತಿಕೊಳ್ಳಬೇಕಿದೆ.| ವಿಠ್ಠಲ ತುಬಾಕೆ, ಸಹಾಯಕ ಆಯುಕ್ತ, ಪಾಲಿಕೆ ವಲಯ ಕಚೇರಿ ನಂ. 6

EndFragment