ಗುಂಡ್ಲುಪೇಟೆ: ದೀಪಾವಳಿ ಹಬ್ಬದ ಹಿಂದಿನ ರಾತ್ರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಗುರುವಾರವೂ ಕೂಂಬಿಂಗ್ ನಡೆಸಿತು.
ದೀಪಾವಳಿ ಹಬ್ಬದಂದು ಬಂಡೀಪುರ ಹುಲಿ ಯೋಜನೆಯ ಬಫರ್ ವಲಯದ ವ್ಯಾಪ್ತಿಯ ಹಕ್ಕಲಪುರ, ಇಂಗಲವಾಡಿ, ಮಂಚಹಳ್ಳಿ ಹಾಗೂ ಅಗತಗೌಡನಹಳ್ಳಿ ಗ್ರಾಮಗಳಲ್ಲಿ ಹುಲಿ ಮತ್ತು ಚಿರತೆಗಳು ದಾಳಿ ನಡೆಸಿ ಜಾನುವಾರುಗಳನ್ನು ಕೊಂದು ಹಾಕಿದ್ದವು. ಇದರಿಂದ ಹುಲಿ, ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾಕಾನೆ ಪಾರ್ಥಸಾರಥಿ ನೆರವಿನಿಂದ ಎರಡನೇ ದಿನ ಕೂಂಬಿಂಗ್ ನಡೆಸಿತ್ತು. ವೀರನಪುರ ಬಸವಣ್ಣ ಅವರ ಬಾಳೆತೋಟದಲ್ಲಿಯೂ ಮಂಗಳವಾರ ಬೆಳಗ್ಗೆ ಭಾರಿ ಗಾತ್ರದ ಹುಲಿ ಸಂಚರಿಸಿದ್ದು ಕಂಡುಬಂದಿತ್ತು.
ಬುಧವಾರ ಸಮೀಪದ ಪಡಗೂರು ಅಡವಿ ಮಠದ ರಸ್ತೆಯಿಂದ ಪರಮಾಪುರಕ್ಕೆ ಹೋಗುವ ಮಾರ್ಗದಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದರಿಂದ ಗುರುವಾರ ಅಲ್ಲಿ ಕೂಂಬಿಂಗ್ ನಡೆಸಲಾಗುತ್ತಿದೆ ಎಂದು ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ತಿಳಿಸಿದ್ದಾರೆ.