ಜಿಲ್ಲೆ

ಶಾಲೆಗೆ ಗೋಡೆಯಲ್ಲಿ ವರ್ಣ ಚಿತ್ತಾರ : ಸರ್ಕಾರಿ ಸ್ಕೂಲ್‌ಗೆ ಹೊಸ ರೂಪ ಕೊಟ್ಟ ಕಲಾವಿದ

ಪ್ರವೀಣ್‌ರಾಜ್ ಕೊೈಲ ಕಡಬ

ಸರ್ಕಾರಿ ಶಾಲೆಯೆಂದರೆ ಬಣ್ಣಗೆಟ್ಟ ಗೋಡೆ, ಸೋರುವ ಸೂರು ಎಂಬ ಪರಿಸ್ಥಿತಿಯಿರುತ್ತದೆ. ಆದರೆ ಗೋಡೆಗಳಿಗೆ ಬಣ್ಣ ಬಳಿದು ವರ್ಣಾಲಂಕರ ಮಾಡುವ ಮೂಲಕ ಗಮನ ಸೆಳೆಯುವ ಸರ್ಕಾರಿ ಶಾಲೆಯೊಂದು ಕಡಬ ತಾಲೂಕಿನ ಕೊೈಲ ಗ್ರಾಮದ ಸಬಳೂರಿನಲ್ಲಿದೆ. ಇಲ್ಲಿನ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವರ್ಣ ಚಿತ್ತಾರ ಈಗ ವೈರಲ್ ಆಗುತ್ತಿದೆ. ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಸಹಕಾರದೊಂದಿಗೆ ದಾನಿಗಳ ನೆರವಿನಿಂದ ಶಿಕ್ಷಣ, ಕಲೆ, ನೃತ್ಯ, ಜಾನಪದ ಸಂಸ್ಕೃತಿ ಪ್ರತಿಬಿಂಬಿಸುವ ವರ್ಣ ಚಿತ್ತಾರಗಳು, ಗೋಡೆ ಬರಹಗಳು ಶಾಲಾ ಗೋಡೆಗಳಲ್ಲಿ ಕಲಾವಿದನ ಕೈಚಲಕದಿಂದ ಸುಂದರವಾಗಿ ಮೂಡಿವೆ.

ತುಳುನಾಡಿನ ಕಲೆಗಳು, ರಸ್ತೆಯ ಸೂಚನ ಫಲಕಗಳು, ಇತಿಹಾಸದ ವಿಷಯಗಳು, ನದಿಗಳ ವಿವರ, ಭಾರತೀಯ ಸೇನೆಯ ಮಾಹಿತಿ, ತರಗತಿ ಸನ್ನಿವೇಶಗಳ ಚಿತ್ರಗಳು, ಶಿಕ್ಷಣಕ್ಕೆ ಸಂಬಂಧಪಟ್ಟ ವಿಜ್ಞಾನ, ಪರಿಸರ , ಪಿಎಂ ಪೋಷಣ್ ಶಾಲಾ ಮಾಹಿತಿ ಮೊದಲಾದವುಗಳ ಗೋಡೆ ಬರಹ 25ಕ್ಕೂ ಹೆಚ್ಚು ಸುಂದರ ಚಿತ್ರ ಕಲಾವಿದ ಅನಿಲ್ ಕಡಬ ಅವರ ಕುಂಚದಿಂದ ಗೋಡೆಗಳ ಮೇಲೆ ಸೃಷ್ಟಿಯಾಗಿದೆ.

64 ವರ್ಷದ ಹಿಂದೆ ಆರಂಭವಾದ ಈ ಶಾಲೆಯಲ್ಲಿ ಪ್ರಸ್ತುತ 129 ವಿದ್ಯಾರ್ಥಿಗಳಿದ್ದಾರೆ. ಮುಖ್ಯಶಿಕ್ಷಕರ ಕೊಠಡಿ, ಎಂಟು ತರಗತಿ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಧನ ಸಹಾಯ

ಈ ಶಾಲೆಯ ಸೌಂದರ್ಯ ವೃದ್ಧಿಸುವ ಉದ್ದೇಶದಿಂದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಎರ್ಮಡ್ಕ ಹಾಗೂ ಶೇಖರ ಪಾಪುದಮಂಡೆ ಅಧ್ಯಕ್ಷತೆಯ ಶಾಲಾಭಿವೃದ್ದಿ ಸಮಿತಿಯ ತಂಡದಿಂದ ಶಾಲಾ ಸೌಂದರ್ಯಕರಣ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ದಾನಿಗಳ ನೆರವು ಯಾಚಿಸಲಾಗಿತ್ತು. ಸುಮಾರು 2 ಲಕ್ಷ ರೂ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ದಾನಿಗಳು, ಹಳೇ ವಿದ್ಯಾರ್ಥಿಗಳು, ಮಕ್ಕಳ ಪಾಲಕರು ಹಾಗೂ ಶಾಲಾ ಶಿಕ್ಷಕರು ಧನ ಸಹಾಯ ನೀಡಿದ್ದಾರೆ.

ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಮಾಡುತ್ತಿರುವ ಈ ಕಾರ್ಯ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ ಎನ್ನುತ್ತಾರೆ ಶಾಲಾ ಮುಖ್ಯಶಿಕ್ಷಕಿ ವಾರಿಜ ಬಿ ಅವರು.

ಹಳೇ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿ ಆಶಯದಂತೆ ಯೋಜನೆ ರೂಪಿಸಿಕೊಂಡು ಕಾರ್ಯನುಷ್ಠಾನಕ್ಕಿಳಿದಾಗ ಆರಂಭದಿಂದಲೇ ದಾನಿಗಳ ಸಹಕಾರ ದೊರೆಯಿತು. ಶಾಲೆಗೆ ಬಣ್ಣ ಬಳಿದು ಗೋಡೆಗಳನ್ನು ವೈವಿಧ್ಯಮಯ ಚಿತ್ರಗಳಿಂದ ಸಿಂಗರಿಸಿ ಹೊಸರೂಪ ನೀಡಬೇಕೆಂಬ ಗುರಿ ಸಾಧಿಸಲಾಗಿದೆ. ನಿರೀಕ್ಷೆಯಿಂದ ಹೆಚ್ಚಿನ ಹಣ ಸಂಗ್ರಹವಾಗಿದೆ. ಉಳಿಕೆ ಹಣದಲ್ಲಿ ಶಾಲಾ ಆವರಣ ಮುಂಬಾಗ ವಾಹನ ಪಾರ್ಕಿಂಗ್ ಮಾಡುವ ಸಲುವಾಗಿ ಸಮತಟ್ಟುಗೊಳಿಸಲಾಗುವುದು. - ಗಣೇಶ್ ಗೌಡ ಎರ್ಮಡ್ಕ, ಅಧ್ಯಕ್ಷರು ಹಳೇ ವಿದ್ಯಾರ್ಥಿ ಸಂಘ ಶಾಲೆಯನ್ನು ಅಂದಗೊಳಿಸುವ ಉದ್ದೇಶದಿಂದ ಶಿಕ್ಷಕರ ಪ್ರೋತ್ಸಾಹದಿಂದ ದಾನಿಗಳ ನೆರವಿನಿಂದ ಶಾಲೆಗೆ ಬಣ್ಣ ಬಳಿಯಲಾಗಿದೆ. ಶೈಕ್ಷಣಿಕ ಚಟುವಟಿಕೆಗೆ ಪೂರಕವಾದ ಚಿತ್ರ, ಗೋಡೆ ಬರಹಗಳನ್ನು ಮಾಡಲಾಗಿದೆ. ನಿರೀಕ್ಷೆ ಮೀರಿ ಯೋಜನೆ ಕಾರ್ಯಗತವಾಗಿದೆ. ಶಾಲೆಯ ಅಭಿವೃದ್ಧಿಯ ದೃಷ್ಟಿಯಿಂದ ಇನ್ನೂ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. - ಶೇಖರ ಗೌಡ ಪಾಪುದಮಂಡೆ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ