ಜಿಲ್ಲೆ

ಮಧುಗಿರಿಯಲ್ಲಿ 2 ಕಾರುಗಳ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸೇರಿ ಐವರ ದುರ್ಮರಣ

ತುಮಕೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಐವರು ಮೃತಪಟ್ಟಿರುವ ದಾರುಣ ಘಟನೆ ತುಮಕೂರಿನ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯದ ಬಳಿ ಭಾನುವಾರ ರಾತ್ರಿ 7.30ರ ಸುಮಾರಿಗೆ ನಡೆದಿದೆ.

ಮೃತ ಐವರಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರೆಂದು ತಿಳಿದುಬಂದಿದೆ. ಒಂದು ಕಾರಿನಲ್ಲಿ ನಾಲ್ವರು ಹಾಗೂ ಮತ್ತೊಂದು ಕಾರಿನಲ್ಲಿ ಓರ್ವ ಮೃತಪಟ್ಟಿದ್ದಾರೆ. ಮೃತರನ್ನು ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಯೋಗೆಶ್, ಅವರ ಪುತ್ರಿ ಸಿಂಧು (12) ಸೇರಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ.

ಕೆಎ-03 NB 2646 ಸಂಖ್ಯೆಯ ಸಿಯಾಜ್ ಮಾರುತಿ ಕಾರು ಹಾಗೂ ಕೆಎ-64 M 2627 ಸಂಖ್ಯೆಯ ಟಿಯಾಗೋ ಕಾರು ನಡುವೆ ಕೆರೆಗಳಪಾಳ್ಯ ಹಾಗೂ ಕಾಟಗಾನಹಟ್ಟಿ ಬಳಿ ಅಪಘಾತ ಸಂಭವಿಸಿದೆ. ಸಿಯಾಜ್ ಮಾರುತಿ ಕಾರಿನಲ್ಲಿ ಮೃತ ಯೋಗೇಶ್ ಕುಟುಂಬ ತೆರಳುತ್ತಿತ್ತು. ಊರಿನಲ್ಲಿ ಗಣೇಶ ಹಬ್ಬ ಮುಗಿಸಿಕೊಂಡು ವೈ‌.ಎನ್. ಹೊಸಕೋಟೆ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದರು. ಬೆಂಗಳೂರಿನ ಜೆಪಿ ನಗರದಲ್ಲಿ ಯೋಗೇಶ್​ ಕುಟುಂಬ ವಾಸವಿತ್ತು.

ಟಿಯಾಗೋ ಕಾರಿನಲ್ಲಿದ್ದ ನಾಗರಾಜ್ ಎಂಬುವರು ಮೃತಪಟ್ಟಿದ್ದಾರೆ. ನಾಗರಾಜ್ ಕೊರಟಗೆರೆ ಕಡೆಯಿಂದ ಮಧುಗಿರಿ ಕಡೆ ತೆರಳ್ತಿದ್ರು. ಕಾಟಗಾನಹಟ್ಟಿ ಹಾಗೂ ಕೆರೆಗಳಪಾಳ್ಯ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.

ಡಿಕ್ಕಿಯಾದ ರಭಸಕ್ಕೆ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಟಿಯಾಗೋ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ತುಮಕೂರು ಎಸ್​ಪಿ ಅಶೋಕ್ ಕೆ.ವಿ ಹಾಗೂ ಮಧುಗಿರಿ ಪಿಎಸ್​ಐ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ಕಾರುಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.