ಚಿಕ್ಕಬಳ್ಳಾಪುರ: ಚೆನ್ನಾಗಿ ಓದಿ ದೊಡ್ಡ ಹುದ್ದೆಗಳನ್ನು ಪಡೆಯಬೇಕು ಅಂತೀರಾ, ನಾವು ರೈತರಾಗೋದು ಬೇಡವಾ?, ಊರಲ್ಲಿ ಕರೆಂಟೇ ಇರೋದಿಲ್ಲ, ಹೆಂಗೆ ಓದೋದು? ಉಚಿತ ಬಸ್ ಪಾಸ್ ಇದೆ. ಆದರೆ, ನಮ್ಮೂರಿಗೆ ಬಸ್ಸೇ ಬರೋದಿಲ್ಲ. ಯೋಜನೆ ಘೋಷಿಸಿ ಸುಮ್ಮನಾಗಿ ಬಿಟ್ಟರೆ ಏನು ಪ್ರಯೋಜನ? ಅನುಕೂಲವಾಗುತ್ತಿದೆಯೇ? ಎಂಬುದನ್ನು ತಿಳಿದುಕೊಳ್ಳುವುದಿಲ್ಲವಾ?.
ಹೀಗೆ ಪುಂಖಾನುಪುಂಖ ಪ್ರಶ್ನೆಗಳು ಕೇಳಿ ಬಂದಿದ್ದು ಯುವ ಸಂವಾದದಲ್ಲಿ. ಚಿಕ್ಕಬಳ್ಳಾಪುರದಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಮೊದಲ ಮತದಾನದ ಹಕ್ಕು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಮತ್ತು ಶಾಸಕರನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರಶ್ನಿಸಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಮಾತನಾಡಿ, ಪ್ರತಿಯೊಬ್ಬರು ಮತಗಟ್ಟೆಗೆ ಹೋಗಿ ಮತ ಚಲಾಯಿಸಿ, ದೇಶವನ್ನು ಬದಲಾಯಿಸಬೇಕು. ಕೇವಲ ಒಂದು ಮತ ಎಂಬ ಅಸಡ್ಡೆ ಭಾವನೆಯನ್ನು ಹೊಂದಿರಬಾರದು. ಸಂವಿಧಾನ ಪ್ರಜೆಗಳಿಗೆ ನೀಡಿದ ಈ ಹಕ್ಕು ಆಡಳಿತ ವ್ಯವಸ್ಥೆಗೆ ಪಾಠ ಕಲಿಸುತ್ತದೆ ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಜೀವನದಲ್ಲಿ ಗುರಿಯನ್ನು ಹೊಂದಿರದಿದ್ದಲ್ಲಿ, ಕಠಿಣ ಪರಿಶ್ರಮದಿಂದ ಸಾಧನೆ ತೋರದಿದ್ದಲ್ಲಿ ಉಜ್ವಲ ಭÀವಿಷ್ಯ ಹಾಳಾಗುತ್ತದೆ. ಅವಕಾಶಗಳನ್ನು ಕಳೆದುಕೊಂಡು ಇನ್ನೊಬ್ಬರ ಕನಸಿನ ಸಾಕಾರಕ್ಕಾಗಿ ಶ್ರಮಿಸಬೇಕಾಗುತ್ತದೆ. ಒಬ್ಬರ ಬಳಿ ಕೆಲಸಕ್ಕೆ ಸೇರಿಕೊಳ್ಳುವ ಮನೋಭಾವನೆಯನ್ನು ಬಿಟ್ಟು ಬೇರೆಯವರಿಗೆ ಉದ್ಯೋಗ ನೀಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು. ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ನಿವೃತ್ತ ಡಿಡಿಪಿಐ ಅಜಿತ್ ಪ್ರಸಾದ್ ಮತ್ತಿತರರು ಇದ್ದರು.
*ವಿದ್ಯಾರ್ಥಿಗಳ ಖಡಕ್ ಪ್ರಶ್ನೆಗಳು
ಎಲ್ಲ ಕಡೆ ಚೆನ್ನಾಗಿ ದೊಡ್ಡ ಹುದ್ದೆಗೆ ಹೋಗಿ ಹೆಚ್ಚಿನ ಹಣವನ್ನು ಸಂಪಾದಿಸಲು ಸಲಹೆ ನೀಡಲಾಗುತ್ತದೆ. ಎಲ್ಲರೂ ಹೀಗಾದರೆ ರೈತರಾಗೋರು ಯಾರು? ದೇಶಕ್ಕೆ ಅನ್ನವನ್ನು ಕೊಡೋರು ಯಾರು? ಜನರು ಹೇಗೆ ಬದುಕುತ್ತಾರೆ ಎಂದು ವಿದ್ಯಾರ್ಥಿ ಕೆ.ವಿ.ರಾಜೀವ್ ಪ್ರಶ್ನಿಸಿದರು. ಊರಿನಲ್ಲಿ ಕರೆಂಟ್ ಇರುವುದಿಲ್ಲ. ಇದರಿಂದ ಓದುವುದು ಹೇಗೆ? ತುಂಬಾ ಕಷ್ಟವಾಗುತ್ತಿದೆ ಎಂದು ಆಕಾಶ ಪಿಯು ಕಾಲೇಜಿನ ವಿದ್ಯಾರ್ಥಿನಿ ಕಲ್ಪನಾ ಅಳಲು ತೋಡಿಕೊಂಡರು.
ರಾಜ್ಯ ಸರ್ಕಾರವು ಉಚಿತ ಸೇವೆಯ ಗ್ಯಾರಂಟಿ ಯೋಜನೆಯನ್ನು ಘೋಷಿಸಿದೆ. ಆದರೆ, ಇದರ ಅನುಷ್ಠಾನ ಮತ್ತು ಜನರಿಗೆ ಅನುಕೂಲವಾಗುವುದರ ಬಗ್ಗೆ ಗಮನಹರಿಸುವುದಿಲ್ಲವೇ? ನಮ್ಮೂರಿಗೆ ಬಸ್ ಬರೋದಿಲ್ಲ, ಪ್ರತಿದಿನ ನಡೆದುಕೊಂಡು ಬರಬೇಕು. ದುಡ್ಡು ಕೊಟ್ಟು ಖಾಸಗೀ ವಾಹನದಲ್ಲಿ ಪ್ರಯಾಣಿಸಬೇಕು ಎಂದು ವಿದ್ಯಾರ್ಥಿನಿ ಭಾರ್ಗವಿ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಅಮೃತ ಖಾಸಗೀ ಕಾಲೇಜು ವಿದ್ಯಾರ್ಥಿಗಳಿಗೂ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿದರು.