ಜಿಲ್ಲೆ

15ರಿಂದ ಕಾಲೇಜು ಕಾರ್ಯಾರಂಭ

ಚಿಕ್ಕಬಳ್ಳಾಪುರ ಸರ್ಕಾರಿ ವೈದ್ಯಕಿಯ ಕಾಲೇಜಿನ ನೂತನ ಕಟ್ಟಡದ ಸ್ಥಳಕ್ಕೆ ಸಚಿವರಾದ ಶರಣ ಪ್ರಕಾಶ್​ ಪಾಟೀಲ್​, ಡಾ ಎಂ.ಸಿ.ಸುಧಾಕರ್​, ಶಾಸಕ ಪ್ರದಿಪ್​ ಈಶ್ವರ್​ ಭೇಟಿ ನೀಡಿ, ಪರಿಶೀಲಿಸಿದರು.

ಚಿಕ್ಕಬಳ್ಳಾಪುರ ಡೆಸ್ಕ್

ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಆರ್​.ಪಾಟೀಲ ಮಾಹಿತಿ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ತಾಲೂಕಿನ ಅರೂರು ಸಮೀಪ ನೂತನವಾಗಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ಸೆ.15ರಿಂದ ಸರ್ಕಾರಿ ವೈದ್ಯಕಿಯ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಆರ್​.ಪಾಟೀಲ ತಿಳಿಸಿದರು.
ಮುದ್ದೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುದ್ದೇನಹಳ್ಳಿಯಲ್ಲಿನ ವಿಟಿಯು ಕ್ಯಾಂಪಸ್​ನಲ್ಲಿ ತಾತ್ಕಾಲಿಕವಾಗಿ ಕಾಲೇಜು ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ನಿಯಮಾನುಸಾರ ಸರ್ಕಾರಿ ವೈದ್ಯಕಿಯ ಕಾಲೇಜಿನ ಕಲಿಕಾ ಪ್ರಕ್ರಿಯೆಗಳನ್ನು ಮುಗಿಸಲಿದ್ದು, ಕಳೆದ ಎರಡು ಶೈಣಿಕ ಸಾಲಿನಲ್ಲಿ ದಾಖಲಾಗಿರುವ 200 ವೈದ್ಯಕಿಯ ವಿದ್ಯಾರ್ಥಿಗಳು ಮತ್ತು ಪ್ರಸಕ್ತ ಸಾಲಿನ 100 ವಿದ್ಯಾರ್ಥಿಗಳು ಸೇರಿದಂತೆ 300 ವಿದ್ಯಾರ್ಥಿಗಳು ಹೊಸ ಕಟ್ಟಡದಲ್ಲಿ ಸೆ.15ರಿಂದ ವ್ಯಾಸಂಗ ಮಾಡುವಂತಾಗಲು ಕ್ರಮ ಕೈಗೊಳ್ಳಲಾಗುತ್ತದೆ. ಕಲಿಕಾ ಪ್ರಕ್ರಿಯೆಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಉನ್ನತ ಶಿಣ ಸಚಿವ ಡಾ.ಎಂ.ಸಿ.ಸುಧಾಕರ್​ ಮಾತನಾಡಿ, ವಿಶ್ವೇಶ್ವರಯ್ಯ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಫಾರ್​ ಸೂಪರ್​ ಟ್ರೇನರ್ಸ್​ ಸಂಸ್ಥೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ 10 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಇದಕ್ಕೆ ಸರ್ಕಾರಿ ಅನುದಾನ 14.9 ಕೋಟಿ ರೂ. ಜತೆಗೆ 4.35 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಮುಂದಿನ ಮಾರ್ಚ್​ ವೇಳೆಗೆ ಪೂರ್ಣಕಾಲಿಕವಾಗಿ ಕೋರ್ಸನ್ನು ಆರಂಭಿಸಲಾಗುವುದು ಎಂದರು.
ಸೂಪರ್​ ಟ್ರೇನರ್ಸ್​ ಸಂಸ್ಥೆಯು ವಿವಿಧ ಕೌಶಲಗಳಲ್ಲಿ ನೈಪುಣ್ಯ ಹೊಂದಿರುವ ತರ ಮೂಲಕ ತರಬೇತಿ ನೀಡುವ ಕೇಂದ್ರವಾಗಲಿದೆ. ಬ್ಯಾಚುಲರ್​ ಆ್​ ಇಂಜಿನಿಯರಿಂಗ್​, ಡಿಪ್ಲೊಮಾ ಜತೆಗೆ ವೃತ್ತಿಪರ ಪದವಿ ಹೊಂದಿರುವವರಿಗೆ ತರಬೇತಿ ಕೋರ್ಸ್​ ಪ್ರಾರಂಭಿಸಲು ಚಿಂತಿಸಲಾಗಿದೆ ಎಂದರು.
ಉದ್ಯೋಗದಾತ ಕಂಪನಿಗಳು ಬಹುತೇಕ ವಿಶೇಷ ಅನುಭವ ಹೊಂದಿರುವವರಿಗೆ ಆದ್ಯತೆ ನೀಡುತ್ತಿವೆ. ಇದರಿಂದ ಪದವಿ ಪಡೆದ ಹೊಸಬರಿಗೆ ಉದ್ಯೋಗ ಪಡೆಯುವುದು ಸವಾಲಾಗಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೌಶಲಾಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಶಾಸಕ ಪ್ರದಿಪ್​ ಈಶ್ವರ್​, ಕೌಶಲಾಭಿವದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ನಿರ್ದೇಶಕ ಶ್ರೀನಿವಾಸ್​, ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ, ಜಿಪಂ ಸಿಇಒ ಪ್ರಕಾಶ್​ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ಎಲ್​.ನಾಗೇಶ್​, ಸರ್ಕಾರಿ ಮೆಡಿಕಲ್​ ಕಾಲೇಜಿನ ಡೀನ್​ ಮಂಜುನಾಥ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್​ ಎಸ್​ ಮಹೇಶ್​ ಕುಮಾರ್​, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಮಂಜುಳಾದೇವಿ ಮತ್ತಿತರರು ಇದ್ದರು.


ಎಂಆರ್​ಐ ಸ್ಕಾನಿಂಗ್​ ಸೆಂಟರ್​ ಮಂಜೂರು:
ಜಿಲ್ಲಾಸ್ಪತ್ರೆಗೆ ಎಂಆರ್​ಐ ಸ್ಕಾನಿಂಗ್​ ಯಂತ್ರವನ್ನು ತ್ವರಿತವಾಗಿ ಒದಗಿಸುವುದರ ಜತೆಗೆ ಈಗಾಗಲೇ ಹಳೇ ಆಸ್ಪತ್ರೆಯಲ್ಲಿನ ಸಿಟಿ ಸ್ಕಾನಿಂಗ್​ ಯಂತ್ರವನ್ನು ಇಲ್ಲಿಗೆ ವರ್ಗಾಯಿಸಲಾಗುತ್ತದೆ ಎಂದು ವೈದ್ಯಕಿಯ ಶಿಕ್ಷಣ ಸಚಿವರು ತಿಳಿಸಿದರು.

ವಿವಿಧೆಡೆ ಭೇಟಿ:
ಸಚಿವರು ಚಿಕ್ಕಬಳ್ಳಾಪುರ ತಾಲೂಕಿನ ಅಂಗಟ್ಟ ಸಮೀಪ 14.9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರ್​.ಎಂ.ವಿಶ್ವೇಶ್ವರಯ್ಯ ನ್ಯಾಷನಲ್​ ಇನ್ಸಿಟ್ಯೂಟ್​ ಫಾರ್​ ಸೂಪರ್​ ಟೆನರ್ಸ್​ ಸಂಸ್ಥೆಯ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಬಳಿಕ ಮುದ್ದೇನಹಳ್ಳಿಯ ಸರ್​.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಲ್ಲಿನ ತಾತ್ಕಾಲಿಕ ವೈದ್ಯಕಿಯ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿದರು. ಇದೇ ವೇಳೆ ಭಾರತ ರತ್ನ ಸರ್​ ಎಂ ವಿಶ್ವೇಶ್ವರಯ್ಯ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಚಿಕ್ಕಬಳ್ಳಾಪುರ ನಗರದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕಿಯ ಸೇವೆಗಳ ಕುರಿತು ಮಾಹಿತಿ ಪಡೆದರು.

ವೈದ್ಯಕಿಯ ವಿದ್ಯಾರ್ಥಿಗಳ ಅಳಲು:
ತಾತ್ಕಾಲಿಕ ಕಟ್ಟಡದಲ್ಲಿ ವೈದ್ಯಕಿಯ ಶಿಕ್ಷಣ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸಚಿವರು ಎದುರು ಅಳಲು ತೋಡಿಕೊಂಡರು. ಮೂಲ ಸೌಕರ್ಯಗಳ ಕೊರತೆ, ಕಟ್ಟಡದಲ್ಲಿ ಜಾಗದ ಕಿರಿಕಿರಿ, ಅಧ್ಯಯನಕ್ಕೆ ತೊಡಕು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗಮನ ಸೆಳೆದರು. ಇದಕ್ಕೆ ಸಂಸ್ಥೆಯ ಸಿಬ್ಬಂದಿ ಧ್ವನಿಗೂಡಿಸಿದರು. ಸಮಸ್ಯೆಯನ್ನು ಆಲಿಸಿದ ಸಚಿವದ್ವಯರು, ಸಮಸ್ಯೆಗಳ ತ್ವರಿತ ಪರಿಹಾರದ ಭರವಸೆ ನೀಡಿದರು. ಪ್ರಸಕ್ತ ಸಾಲಿನಲ್ಲಿ ಕನಕಪುರದಲ್ಲಿ ಹೊಸ ವೈದ್ಯಕಿಯ ಕಾಲೇಜು ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಡಾ ಕೆ.ಸುಧಾಕರ್​ ಹೇಳಿಕೆಗೆ ತಿರುಗೇಟು:
ಸರ್ಕಾರಿ ವೈದ್ಯಕಿಯ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಬಿಲ್​ ಪಾವತಿಸಿಲ್ಲ. ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ? ಎಂಬ ಮಾಜಿ ಸಚಿವ ಡಾ ಕೆ.ಸುಧಾಕರ್​ ಹೇಳಿಕೆಗೆ ವೈದ್ಯಕಿಯ ಶಿಕ್ಷಣ ಸಚಿವ ಶರಣ ಪ್ರಕಾಶ್​ ಪಾಟೀಲ್​ ತಿರುಗೇಟು ನೀಡಿದ್ದಾರೆ. ಮಾನ ಮರ್ಯಾದೆ ಇರುವವರಿಗೆ ಜನರು ಅಧಿಕಾರ ಕೊಟ್ಟಿದ್ದಾರೆ. ಮಾನ ಮರ್ಯಾದೆ ಇಲ್ಲದವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ಸಚಿವರು ತಿರುಗೇಟು ನೀಡಿದರು.