ಜಿಲ್ಲೆ

ಜಾತಕದ ಪರಿಹಾರ ಹೆಸರಿನಲ್ಲಿ ಉಪನ್ಯಾಸಕಿಗೆ ಪಂಗನಾಮ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಮದುವೆಗೆ ಜಾತಕ ತೊಂದರೆಯ ಪರಿಹಾರ ಪೂಜೆಯ ನೆಪದಲ್ಲಿ ಕಾಲೇಜಿನ ಉಪನ್ಯಾಸಕಿಗೆ ನಕಲಿ ಜ್ಯೋತಿಷಿ ಒಬ್ಬ, ಲಕ್ಷಾಂತರ ರೂ ವಂಚಿಸಿದ್ದಾನೆ.  ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿನ ಪ್ರತಿಷ್ಠಿತ ಖಾಸಗೀ ಪಿಯು ಕಾಲೇಜಿನ ಉಪನ್ಯಾಸಕಿ ಕುಮಾರಿ (34 ವರ್ಷ) ವಂಚನೆಗೊಳಗಾದವರು. ಆನ್ ಲೈನ್ ನಲ್ಲಿ ಜಾತಕದ ಬಗ್ಗೆ ಜಾಹಿರಾತು ನೋಡುತ್ತಿರುವ ಸಂದರ್ಭದಲ್ಲಿ ಅಪರಿಚಿತರು ವೈಬ್ ಸೈಟ್ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ. ಕೊನೆಗೆ ಶಂಕರಾಚಾರ್ಯ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ, ನಿಮ್ಮ ಜಾತಕದಲ್ಲಿ ತೊಂದರೆ ಇದೆ. ನೀವು ಅಷ್ಟಮಂಡಲ ಪೂಜೆಯನ್ನು ಮಾಡಿಸಿದರೆ ದೋಷ ಪರಿಹಾರವಾಗುತ್ತದೆ ಎಂಬುದಾಗಿ ಹೇಳಿದ್ದು ವಿವಿಧ ಹಂತಗಳಲ್ಲಿ 1.80 ಲಕ್ಷ ರೂಗಳಿಗಿಂತಲೂ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದಾನೆ. ಇದರ ನಡುವೆಯೂ ಹೆಚ್ಚುವರಿ ಶುಲ್ಕಕ್ಕೆ ಒತ್ತಾಯಿಸಲಾಗಿದೆ. ಕೊನೆಗೆ ಒತ್ತಡವನ್ನು ಸಹಿಸಲಾಗದೇ ಸಂತ್ರಸ್ಥರು ಠಾಣೆಗೆ ದೂರು ನೀಡಿದ್ದಾರೆ.

*ಪೂಜೆಯ ಭಂಗದ ಬೆದರಿಕೆ

ಹಣ ನೀಡುವಿಕೆ ವಿಚಾರವಾಗಿ ಸ್ಪಂದಿಸದಿದ್ದಾಗ ಜ್ಯೋತಿಷಿ ಬೆದರಿಸಿದ್ದಾನೆ. ಪೂಜೆಯ ಸಮಯದಲ್ಲಿ ದೀಪವು ಆರಿ ಹೋಗಿದೆ ಮತ್ತು ಬೇರೆಯವರಿಂದ ಮಾಟ ಮಂತ್ರಗಳು ನಡೆದಿವೆ. ಬೇಗ ಪರಿಹಾರ ಕೈಗೊಳ್ಳದಿದ್ದಲ್ಲಿ ತೊಂದರೆಯಾಗುತ್ತದೆ. ಮಾಂಗಲ್ಯ ಭಾಗ್ಯ ಬರುವುದಿಲ್ಲ ಮತ್ತು ಮನೆಯಲ್ಲಿ ಸಾವಿನ ವಾರ್ತೆಯನ್ನು ಕೇಳಬೇಕಾಗುತ್ತದೆ ಎಂಬುದಾಗಿ ಬೆದರಿಸಲಾಗಿದೆ. ಕೊನೆಗೆ ಕೇಳಿದ ಹಣವನ್ನು ಪಾವತಿಸಿದರೂ ಬಿಡದೇ ಕಾಡಲಾಗಿದೆ ಎಂದು ದೂರಿನಲ್ಲಿ ಶಾಲಿನಿ ಆರೋಪಿಸಿದ್ದಾರೆ.