ದಾವಣಗೆರೆ: ಕಾಲೇಜು ಹಂತದಲ್ಲಿ ಸಂಶೋಧನೆ ನಡೆಸಲು ಸರ್ಕಾರ ಅಗತ್ಯ ಸಂಪನ್ಮೂಲ ಹಾಗೂ ಹಣಕಾಸಿನ ನೆರವು ಕಲ್ಪಿಸಬೇಕು ಎಂದು ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ತಿಳಿಸಿದರು.
ನಗರದ ಬಿಐಇಟಿ ಕಾಲೇಜಿನಲ್ಲಿ ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಸೈನ್ಸ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗುಣಮಟ್ಟದ ಸಂಶೋಧನೆ ಹಾಗೂ ಪ್ರಬಂಧ ಮಂಡನೆಯ ಕೌಶಲ್ಯ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಈ ಹಿಂದೆ ಸ್ನಾತಕೋತ್ತರ ಕಾಲೇಜುಗಳು, ಐಐಟಿ ರೀತಿಯ ಉನ್ನತ ಸಂಸ್ಥೆಗಳಲ್ಲಿ ಮಾತ್ರ ಸಂಶೋಧನೆಗೆ ಸರ್ಕಾರದಿಂದ ಅನುದಾನ ಇತ್ತು. ಸಾಕಷ್ಟು ಬೇಡಿಕೆ ನಂತರ ಅದನ್ನು ಸ್ನಾತಕ ಕಾಲೇಜುಗಳಿಗೂ ವಿಸ್ತರಿಸಲಾಗಿದೆ.
ಆದರೆ, ಸರ್ಕಾರದಿಂದ ನೀಡಲಾಗುವ ಸಂಶೋಧನಾ ಅನುದಾನಕ್ಕೆ ಸಾಕಷ್ಟು ನಿರ್ಬಂಧಗಳಿವೆ ಎಂದು ಹೇಳಿದರು.
ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಸೈನ್ಸ್ ಅಧ್ಯಕ್ಷ ಪ್ರೊ.ಕೆ. ಸಿದ್ದಪ್ಪ ಮಾತನಾಡಿ, ಸಂಶೋಧನೆಗಳಿಗೆ ವಿ.ಜಿ.ಎಸ್.ಟಿ.(ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ) ವತಿಯಿಂದ ಅನುದಾನ ಲಭ್ಯವಿದೆ. ಇದನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಸಂಶೋಧನಾ ಪ್ರಬಂಧಗಳಲ್ಲಿ ಕೃತಿಚೌರ್ಯವಾಗದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ನೈತಿಕ ಚೌಕಟ್ಟು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಸಂಶೋಧಕರಾದ ಡಾ.ಐ.ಆರ್.ಎನ್. ಗೌಡರ್, ಡಾ.ಆರ್.ಶಂಕರ್, ಪ್ರಾಚಾರ್ಯ ಡಾ.ದೇಸಾಯಿ ಇತರರಿದ್ದರು.
ಬಿ.ಎಸ್. ಪುಣ್ಯಶ್ರೀ ಪ್ರಾರ್ಥಿಸಿದರು. ಎಂ.ಆರ್. ಜಗದೀಶ್ ಸ್ವಾಗತಿಸಿದರು. ಡಾ.ಬಿ.ಎಂ.ಪ್ರಸನ್ನ ನಿರೂಪಿಸಿದರು. ಡಾ.ಎಚ್.ಆರ್. ಮಲ್ಲಿಕಾರ್ಜುನ ವಂದಿಸಿದರು.