ಕೊಳ್ಳೇಗಾಲ: ಅಂಗನವಾಡಿ ಕಾರ್ಯುಕರ್ತೆಯರಿಗೆ ಮೊಟ್ಟೆ ಖರೀದಿ ಸಂಬಂಧ ನಿಯಮ ಉಲ್ಲಂಘಿಸಿ ನಗದು ವಿತರಿಸಲಾಗಿದೆ ಎಂಬ ಆರೋಪದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೊಳ್ಳೇಗಾಲದ ಪ್ರಭಾರ ಸಿಡಿಪಿಒ ನಂಜಾಮಣಿ ಅವರನ್ನು ರಾಮನಗರ ತಾಲೂಕು ಸಹಾಯಕ ಸಿಡಿಪಿಒ ಸ್ಥಾನಕ್ಕೆ ವರ್ಗಾವಣೆಗೊಂಡಿದ್ದಾರೆ.
ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಮಹಿಳಾ ಮತ್ತು ಕಲ್ಯಾಣ ಇಲಾಖೆ ಕೊಳ್ಳೇಗಾಲದ ತಾಲೂಕಿನ ಪ್ರಭಾರ ಸಿಡಿಪಿಒ ಆಗಿ ನಂಜಾಮಣಿ ಕಾರ್ಯನಿರ್ವಹಿಸುತ್ತಿದ್ದರು. 2024 ನವೆಂಬರ್ ತಿಂಗಳಲ್ಲಿ ಅಂಗನವಾಡಿ ಕಾರ್ಯುಕರ್ತೆಯರಿಗೆ ಮೊಟ್ಟೆ ಖರೀದಿ ಸಂಬಂಧ ನಿಯಮ ಉಲ್ಲಂಘಿಸಿ ನಗದು ವಿತರಿಸಲಾಗಿದೆ ಎಂಬ ಆರೋಪದ ಮೇರೆಗೆ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ನಂತರ, ಈ ಬಗ್ಗೆ ಇಲಾಖೆ ಸಚಿವರ ಪತ್ರಿಕಾ ಹೇಳಿಕೆಯ ಮೇರೆಗೆ ಪ್ರಕರಣದ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸಲು ತಿಳಿಸಲಾಗಿತ್ತು. ಅದರಂತೆ ಚಾಮರಾಜನಗರ ನೋಡಲ್ ಅಧಿಕಾರಿಗಳು ತನಿಖೆ ನಡೆಸಿ ವರದಿಯನ್ನು ಸಲ್ಲಿಸಿದ್ದು. ಸರದಿ ವರದಿಯಲ್ಲಿ ನಂಜಾಮಣಿ ಅವರನ್ನು ವರ್ಗಾವಣೆ ಮಾಡುವಂತೆ ಅಭಿಪ್ರಾಯ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಾಮರಾಜನಗರ ನೋಡಲ್ ಅಧಿಕಾರಿಗಳ ವರದಿಯನ್ವಯ, ಇಲಾಖೆ ಸಚಿವರ ಅನುಮೋದನೆಯ ಉಲ್ಲೇಖದಂತೆ ನಂಜಾಮಣಿ ಅವರನ್ನು ಕೊಳ್ಳೇಗಾಲ ಪ್ರಭಾರ ಸಿಡಿಪಿಒ ಸ್ಥಾನದಿಂದ ಎತ್ತಂಗಡಿಗೊಳಿಸಿ ರಾಮನಗರ ತಾಲೂಕಿನ ಸಹಾಯಕ ಸಿಡಿಪಿಒ ಸ್ಥಾನಕ್ಕೆ ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.