ಕೊಪ್ಪಳದಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಶುಕ್ರವಾರ ಮಾತನಾಡಿದರು. ಜಿಪಂ ಸಿಇಒ ರಾಹುಲ್ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಇದ್ದರು. 
ಜಿಲ್ಲೆ

ಸೌಲಭ್ಯ ಪಡೆಯಲು ಇ-ಕೆವೈಸಿ ಕಡ್ಡಾಯ

ಕೊಪ್ಪಳ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ತೇವಾಂಶದ ಪ್ರಮಾಣದಲ್ಲಿ ಏರುಪೇರಾಗಲಿದೆ. ಬಿತ್ತನೆ ಮಾಡಿದ ವಿವಿಧ ಬೆಳೆಗಳ ಸಂರಕ್ಷಣೆಗೆ ರೈತರಿಗೆ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಹಾಲ್‌ನಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಬೆಳೆ ಸಮೀಕ್ಷೆಯನ್ನು ರೈತರು ಸ್ವತಹ ಆ್ಯಪ್‌ನಲ್ಲಿ ಮಾಡಬಹುದಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತಿನ ಸಹಾಯಧನ ಇತರ ಸೌಲಭ್ಯ ಪಡೆಯಲು ಇ-ಕೆವೈಸಿ ಮಾಡಿಸಲು ಕ್ರಮ ವಹಿಸಬೇಕು. ಇದಕ್ಕಾಗಿ ಕೃಷಿ, ಕಂದಾಯ, ಗ್ರಾಮ ಆಡಳಿತ ಅಧಿಕಾರಿಗಳು ಒಗ್ಗೂಡಿ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

1,21,386 ರೈತರಿಂದ ಇ-ಕೆವೈಸಿ

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಜಿಲ್ಲೆಯಲ್ಲಿ ಇದುವರೆಗೆ 1,21,386 ರೈತರು ಇ-ಕೆವೈಸಿ ಮಾಡಿಸಿದ್ದಾರೆ. ಇನ್ನು 37,231 ರೈತರು ಮಾಡಿಸಿಕೊಳ್ಳಬೇಕಾಗಿದೆ. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ಸೌಲಭ್ಯ ಪಡೆಯಲು ರೈತರು ಜು.31ರ ವರೆಗೆ ಒಳಗೆ ಬೆಳೆ ವಿಮೆ ನೋಂದಾಯಿಸಿಕೊಳ್ಳಬೇಕು ಎಂದರು.

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಜಿಲ್ಲೆಯ ರೈತರು ಸದುಪಯೋಗ ಪಡೆಸಿಕೊಳ್ಳಬೇಕು. ಪಪ್ಪಾಯ, ಮಾವು, ದ್ರಾಕ್ಷಿ, ದಾಳಿಂಬೆ ಮತ್ತು ಹಸಿ ಮೆಣಸಿನಕಾಯಿ ಬೆಳೆಗಳು ವಿಮೆಗೆ ವ್ಯಾಪ್ತಿಗೆ ಬರಲಿದೆ. ಜು.31ರ ಒಳಗೆ ವಿಮಾ ವಂತಿಗೆಯನ್ನು ಪಾವತಿಸಬೇಕು ಎಂದರು.

ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರ, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕುಗಳಲ್ಲಿ 3,08,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಪೈಕಿ ಇದುವರೆಗೆ 1,96,418 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಭತ್ತ, ಶಕ್ತಿಮಾನ್ ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ ಬಿತ್ತನೆ ಮಾಡಲಾಗಿದೆ. ಇನ್ನುಳಿದ 1,44,950 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯಗಳನ್ನು ಬೆಳೆಯಲು ನಾಟಿ ಮಾಡಿದ್ದಾರೆ ಎಂದರು ತಿಳಿಸಿದರು.


ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕುಗಳಲ್ಲಿ ಜು. 20ರವರೆಗೆ 23,438 ಮೆಟ್ರಿಕ್ ಟನ್ ಯೂರಿಯಾ, 12,659 ಮೆ.ಟನ್ ಡಿಎಪಿ, 1482 ಮೆ.ಟನ್ ಎಂಓಪಿ, 32,776 ಮೆ.ಟನ್ ಎನ್‌ಕೆಪಿಎಸ್ ಮತ್ತು 404 ಮೆ.ಟನ್ ಎಸ್‌ಎಸ್‌ಪಿ ಸೇರಿದಂತೆ ಒಟ್ಟು 70,759 ಮೆಟ್ರಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಈಗಾಗಲೇ 7255.32 ಕ್ವಿಂಟಲ್ ಬಿತ್ತನೆ ಬೀಜಗಳು ಮಾರಾಟವಾಗಿದೆ. ಸದ್ಯ 2358 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನುವಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಪಂ ಸಿಇಒ ರಾಹುಲ್ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಇತರರಿದ್ದರು.