ಮೂಲ್ಕಿ: ಕೈಗಾರಿಕೆಗಳಿಗೆ ಸಮೃದ್ಧ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ದೇವಸ್ಥಾನ ಹಾಗೂ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಶುಕ್ರವಾರ ನಡೆಯಿತು.
ಅಭಿವೃದ್ಧಿ ಹೆಸರಿನಲ್ಲಿ ಕೈಗಾರಿಕೆಗಳಿಗಾಗಿ ಮೂಲ್ಕಿ ತಾಲೂಕಿನಲ್ಲಿ ಸಮೃದ್ಧಭರಿತ ಕೃಷಿಭೂಮಿಯಾದ ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ, ಗ್ರಾಮಗಳ 1091 ಎಕರೆಗೆ ಜಮೀನಿಗೆ ಸರ್ಕಾರ ಭೂಸ್ವಾದೀನ ಅಧಿಸೂಚನೆ ಹೊರಡಿಸಿದ ಕಾರಣ ಮೂರು ಗ್ರಾಮಗಳ ಜನರು ಆತಂಕಕ್ಕೊಳಪಟ್ಟಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಕಾರ್ಕಳದ ಅತ್ತೂರು ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಯಾವುದೇ ಕಾರಣಕ್ಕೂ ಕೃಷಿ ಭೂಮಿ ಸ್ವಾಧೀನಕ್ಕೆ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.
ಬಳ್ಕುಂಜೆ ಸಂತ ಪಾವ್ಲರ ದೇವಾಲಯ, ಕಾರ್ಕಳದ ಅತ್ತೂರು ಬಸಿಲಿಕಾ ಸಂತ ಲಾರೆನ್ಸರ ಚರ್ಚ್ ಧರ್ಮಗುರು ಪಾವ್ಲ್ ಸಿಕ್ವೇರ ಹಾಗೂ ಆಲ್ಬನ್ ಡಿಸೋಜ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಭೂ ಸಂತ್ರಸ್ತರ ಹಿತರಕ್ಷಣಾ ಸಮಿತಿ ಪ್ರಮುಖರಾದ ದೇವದಾಸ್ ಮಲ್ಯ, ಎಲ್ಲಪ್ಪ ಸಾಲ್ಯಾನ್, ಕೆ.ರಾಘವೇಂದ್ರ ಭಟ್, ಐತ್ತಪ್ಪ ಸಾಲ್ಯಾನ್, ಲೋಕೇಶ್ ಸೇರಿಗಾರ್ ಉಪಸ್ಥಿತರಿದ್ದರು.
ಕೊಲ್ಲೂರು, ಉಳೆಪಾಡಿ, ಬಳ್ಕುಂಜೆ ಗ್ರಾಮದ ಬಹುತೇಕ ಭೂಮಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಸಂಬಂಧಿಸಿರುವ ಕಾರಣ ಮೂರು ಗ್ರಾಮದ ಪ್ರಮುಖರು ದೇವಳಕ್ಕೆ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದೇವೆ ಹಾಗೂ ಬಹುತೇಕ ಮೂರು ಗ್ರಾಮಗಳ ಎಲ್ಲ ಸಮುದಾಯದ ಶ್ರದ್ಧಾಕೇಂದ್ರಗಳಿಗೆ ಸಾಮರಸ್ಯದಿಂದ ಕೆಲವೇ ದಿನಗಳಲ್ಲಿ ಭೇಟಿ ನೀಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲ್ಲಿದ್ದೇವೆ.- ಡೇನಿಸ್ ಡಿಸೋಜ ಭೂ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ