ಚಿತ್ರದುರ್ಗ: ಕಾಂಗ್ರೆಸ್, ಯಾವತ್ತೂ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಆದರೆ, ಕಾಂಗ್ರೆಸ್ ಛಿದ್ರವಾಗಿದೆ ಎಂಬ ಬಿಜೆಪಿ ಸುಳ್ಳು ಮಾತಿಗೆ ಮತ್ತೆ ಮತ್ತೆ ಇದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಜ.8 ರಂದು ನಡೆಯಲಿರುವ ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ರಾಜ್ಯಮಟ್ಟದ ಏಕತಾ ಪ್ರಥಮ ಸಮಾವೇಶದ ಲಾಂಛನವನ್ನು ಸಮಾವೇಶದ ಸ್ಥಳ, ವಿಜ್ಞಾನ ಕಾಲೇಜ್ ಮೈದಾನದಲ್ಲಿ ಗುರುವಾರ ಬಿಡುಗಡೆ ಮಾಡಿ ಮಾತನಾಡಿದರು.
ರಾಜ್ಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ಸಿಗೆ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಗೆಲ್ಲುವ ಮೂಲಕ ಪಕ್ಷ ಸದೃಢವಾಗಿದೆ ಎಂಬುದನ್ನು ದೇಶಕ್ಕೆ ಸಾರಬೇಕಿದೆ. ಈ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇವೆ. ಒಳ ಮೀಸಲು ಕುರಿತಾದ ಪಕ್ಷದ ನಿಲುವು ಸೇರಿ ಹಲವು ಅಂಶಗಳನ್ನು ಒಳಗೊಂಡಿರುವ ನಿರ್ಣಯಗಳನ್ನು ಸಮಾವೇಶದಲ್ಲಿ ಪ್ರಕಟಿಸಲಾಗುವುದು ಎಂದರು.
ಕಾಂಗ್ರೆಸ್ಸಿಗೆ ನಿರ್ದಿಷ್ಟ ಮತದಾರರು ಇದ್ದಾರೆ. ಪ್ರತಿ ಚುನಾವಣೆಯಲ್ಲಿ ಶೇ.5 ವ್ಯತ್ಯಾಸವಾದರೂ, ಯುವಜನರು ನಮ್ಮೊಂದಿಗೆ ಇದ್ದಾರೆ. ಎಸ್‌ಸಿ, ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಿಸಿರುವುದಾಗಿ ರಾಜ್ಯ ಸರ್ಕಾರ ಹೇಳಿದರೆ, ಕೇಂದ್ರ ಸಚಿವರು ಇದಕ್ಕೆ ಸಂಬಂಧವಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದರು.
ಮೀಸಲು ಪ್ರಮಾಣ ಹೆಚ್ಚಳ ಹಾಗೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯಡಿ ಮೀಸಲಿಟ್ಟಿದ್ದ ಅನುದಾನ, ವಿವಿಧ ಯೋಜನೆಗಳ ಅನುದಾನ ಪ್ರಮಾಣ ಕಡಿತಗೊಳಿಸಿದ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟ ಆಡಳಿತದ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಲಿ ಎಂದರು.
ಸಮಾವೇಶವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಉದ್ಘಾಟಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರಲ್ಲಿ ಒಬ್ಬರು ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.
ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ, ಮಾಜಿ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ, ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರಾದ ರಘುಆಚಾರ್, ಎಸ್.ಕೆ.ಬಸವರಾಜನ್, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಬಿ.ಸೋಮಶೇಖರ್, ಡಾ.ಬಿ.ತಿಪ್ಪೇಸ್ವಾಮಿ, ಎಂ.ಕೆ.ತಾಜ್‌ಪೀರ್, ಗೀತಾನಂದಿನಿಗೌಡ, ನರಸಿಂಹರಾಜು, ಒ.ಶಂಕರ್, ಶ್ರೀನಿವಾಸ್, ಮರುಳಾರಾಧ್ಯ, ಕೇಶವಮೂರ್ತಿ, ಮಧುಗೌಡ, ಎಚ್.ಅಂಜಿನಪ್ಪ, ಶಶಿಕುಮಾರ್ ಮೊಗವೀರ್, ಎಸ್.ಎನ್.ರವಿಕುಮಾರ್ ಇತರರಿದ್ದರು.