TAX COLLECTION 
ಜಿಲ್ಲೆ

ಬರದ ಸ್ಥಿತಿಯಲ್ಲೂ ಕರ ವಸೂಲಿ

TAX COLLECTION

ಸಾರ್ವಜನಿಕರಿಂದ ಮನೆ, ನೀರಿನ ತೆರಿಗೆ ಸಂಗ್ರಹಕ್ಕೆ ಮುಂದಾದ ಗ್ರಾಪಂ ಸಿಬ್ಬಂದಿ

ಟಿಸಿಎಸ್​ ಮೂರ್ತಿ ತಿಪಟೂರು
ಮೈಕ್ರೋ ಫೈನಾನ್ಸ್​ ಕಂಪನಿಗಳ ಕಿರುಕುಳದಿಂದ ಆತ್ಮಹತ್ಯೆ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಎರಡು ತಿಂಗಳವರೆಗೂ ಸಾಲ ವಸೂಲಿ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ ಬೆನ್ನಲ್ಲೇ, ಗ್ರಾಪಂ ನೌಕರರು ಬಲವಂತವಾಗಿ ಕರ ವಸೂಲಿಗೆ ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ತುಮಕೂರು ಜಿಲ್ಲೆಯ ತಿಪಟೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ, ವಾರಕ್ಕೆ ಒಂದು ಬಾರಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಬರ ನಿರ್ವಹಣೆಗೆ ಕ್ರಮ ವಹಿಸುತ್ತಿದೆ. ಹೈನುಗಾರಿಕೆಗೆ ಮೇವು, ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮೇವು ಬ್ಯಾಂಕ್​ ಪ್ರಾರಂಭಿಸಿದೆ.
ಕುಡಿಯುವ ನೀರಿಗಾಗಿ ವಿಶೇಷ ಅನುದಾನ ಪಡೆದು ಸಮಸ್ಯೆ ಪರಿಹರಿಸುವಂತಾಗಿರುವು ಸಂದರ್ಭದಲ್ಲೂ ಗ್ರಾಪಂ ಸಿಬ್ಬಂದಿ ಸಾರ್ವಜನಿಕರಲ್ಲಿ ಬಲವಂತವಾಗಿ ಮನೆ, ನೀರಿನ ಕರವಸೂಲಿಗೆ ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೇ 17ರಂದು ತಾಪಂ ಸಭಾಂಗಣದಲ್ಲಿ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ನಡೆದ ಸಭೆಯಲ್ಲಿ ಗ್ರಾಪಂ ಬಿಲ್​ಕಲೆಕ್ಟರ್​, ಕಾರ್ಯದರ್ಶಿಗಳು, ಗುಮಾಸ್ತರಿಗೆ ಕಾರ್ಯನಿರ್ವಹಣಾಧಿಕಾರಿಗಳು ಮೌಖಿಕವಾಗಿ ಗ್ರಾಪಂಗಳಲ್ಲಿ ಮನೆ ಕಂದಾಯ ವಸೂಲಿ ಮಾಡಬೇಕು ಎಂದು ಆದೇಶ ಮಾಡಿದ್ದು, ಆದಾಯ ಹೆಚ್ಚಿರುವ ಗ್ರಾಪಂಗಳಿಗೆ ಇಂತಿಷ್ಟು ಕರವಸೂಲಿ ಮಾಡಲೇಬೇಕೆಂಬ ಗುರಿ ನೀಡಲಾಗಿದೆ. ಜತೆಗೆ ಶನಿವಾರ, ರಜಾದಿನವಾದ ಭಾನುವಾರ ಎಂಬುದನ್ನೂ ಮರೆತು ಕರವಸೂಲಿಗೆ ತೆರಳಬೇಕು ಎಂದು ತಾಕೀತು ಮಾಡಲಾಗಿದೆ. ಕರ ವಸೂಲಿಗೆ ಗ್ರಾಮಗಳ ಮನೆಗಳಿಗೆ ತೆರಳುವ ಗ್ರಾಪಂ ಸಿಬ್ಬಂದಿ ಮನೆಮನೆಗೆ ತರಳಿ ಮೇಲಧಿಕಾರಿಗಳ ಆದೇಶದಂತೆ ತುರ್ತಾಗಿ ಕಂದಾಯ ಸಂಗ್ರಹ ಮಾಡಲೇಬೇಕಾಗಿದೆ ಮತ್ತು ಪಂಚಾಯಿತಿವಾರು ಇಂತಿಷ್ಟು ಕರ ವಸೂಲಿ ಮಾಡಲೇಬೇಕೆಂಬ ಗುರಿ ನೀಡಿದ್ದು, ಮೇಲಧಿಕಾರಿಗಳ ಆದೇಶ ಪಾಲಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎನ್ನುತ್ತಾರೆ ಸಿಬ್ಬಂದಿ.

ಗ್ರಾಮಸ್ಥರ ಹಿಡಿಶಾಪ
ಬರಗಾಲ ಘೋಷಣೆಯಾಗಿ ಜನ ಸಾಮಾನ್ಯರು ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗ ಮೈಕ್ರೋ ಫೈನಾನ್ಸ್​ ಗಳ ಬಲವಂತದ ಸಾಲ ವಸೂಲಾತಿ ಕಿರುಕುಳದಿಂದ ತಾಲೂಕಿನ ಅರಳಗುಪ್ಪೆ ಗ್ರಾಮದಲ್ಲಿ ರೈತನ ಆತ್ಮಹತ್ಯೆ ಪ್ರಕರಣ ಸೇರಿ ಜಿಲ್ಲೆಯಲ್ಲಿ ಕೆಲವು ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಯಲ್ಲಿ ಎರಡು ತಿಂಗಳವರೆಗೆ ಸಾಲ ಕೇಳಬಾರದೆಂದು ಆದೇಶ ಮಾಡಲಾಗಿತ್ತು. ಜಿಲ್ಲೆ ಮತ್ತು ತಾಲೂಕಾದ್ಯಂತ ಜಾಗೃತಿ ಸಭೆ ನಡೆಸಲಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರಿ ಅಧಿಕಾರಿಗಳೇ ಬರಗಾಲದ ಸಂದರ್ಭದಲ್ಲಿ ರೈತಾಪಿ ಜನರಿಂದ ಬಲವಂತವಾಗಿ ಕಂದಾಯ ವಸೂಲಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಮಳೆ, ಬೆಳೆ ಇಲ್ಲದೇ ಚಿಂತಾಜನಕ ಸ್ಥಿತಿಯಲ್ಲಿರುವ ರೈತಾಪಿ ಕುಟುಂಬಗಳ ಮನೆಯ ಮುಂದೆ ಕರವಸೂಲಿಗೆ ಬರುವ ಪಂಚಾಯಿತಿ ಸಿಬ್ಬಂದಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಮೈಗಳ್ಳರಿಗೆ ಚುರುಕು ಮುಟ್ಟಿಸಿ
ಕಳೆದ ಬಾರಿ ಉತ್ತಮ ಮಳೆ ಬೆಳೆಯಾಗಿರುವ ಸಂದರ್ಭದಲ್ಲಿ ಕಂದಾಯ ವಸೂಲಿ ಮರೆತ ಅಧಿಕಾರಿಗಳು ಗ್ರಾಪಂ ನಿರ್ವಹಣೆಗೆ ಹಣವಿಲ್ಲದ ಕಾರಣ ಜನಸಾಮಾನ್ಯರ ಮೇಲೆ ಒತ್ತಡ ಹಾಕಿ ಕಂದಾಯ ವಸೂಲಿಗೆ ಮುಂದಾಗಿರುವುದು ವಿಪರ್ಯಾಸ. ಪ್ರತಿ ಬಾರಿಯೂ ಗ್ರಾಮಸ್ಥರು/ಸಾರ್ವಜನಿಕರ ಮೇಲೆ ಗದಾಪ್ರಹಾರ ಮಾಡಲು ಮುಂದಾಗುವ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿ ವರ್ಗದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ನಾಲ್ಕೆ$ದು ವರ್ಷಗಳಿಂದ ಕಂದಾಯ ವಸೂಲಿ ಮಾಡದೇ ಕರ್ತವ್ಯದಲ್ಲಿ ರ್ನಿಲಕ್ಷತನ ತೋರುವ ಕೆಲ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಚುರುಕು ಮುಟ್ಟಿಸಬೇಕಾಗಿದೆ.

ಗ್ರಾಪಂಗಳಲ್ಲಿ ಕಳೆದ ಆರ್ಥಿಕ ವರ್ಷ ಶೇ.40 ಕಂದಾಯ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ರೈತಾಪಿ ಜನರಿಗೆ ಕಂದಾಯ ಆಂದೋಲನದ ಬಗ್ಗೆ ತಿಳಿವಳಿಕೆ ಮೂಡಿಸುವ ದೃಷ್ಟಿಯಲ್ಲಿ ಮತ್ತು ಕಂದಾಯ ಸಂಗ್ರಹಣೆಯಿಂದ ಪಂಚಾಯಿತಿಗಳ ನಿರ್ವಹಣೆ, ಕುಡಿಯುವ ನೀರು ನಿರ್ವಹಣೆ, ಸಿಬ್ಬಂದಿ ಸಂಬಳಕ್ಕೆ ಅನುಕೂಲಕರವಾಗುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ನಿರ್ದೇಶನದಂತೆ ಕರ ವಸೂಲಿ ಮಾಡುವಂತೆ ಗ್ರಾಪಂ ಸಿಬ್ಬಂದಿಗೆ ಮೌಖಿಕವಾಗಿ ಆದೇಶ ಮಾಡಲಾಗಿದೆ. ನಾಗರಾಜು ತಾಪಂ ಇಒ ತಿಪಟೂರು

ಮೇಲಧಿಕಾರಿಗಳ ಆದೇಶದಂತೆ ಹಳ್ಳಿಗಳಿಗೆ ತೆರಳಿ ಕಂದಾಯ ವಸೂಲಿ ಮಾಡುತ್ತಿದ್ದೇವೆ. ವಸೂಲಿ ಮಾಡದಿದ್ದರೆ ಕರ್ತವ್ಯಲೋಪವಾಗುತ್ತದೆ. ಸರ್ಕಾರದ ಆದೇಶ ಪಾಲಿಸುವುದು ನಮ್ಮ ಜವಾಬ್ದಾರಿ. ಹೆಸರು ಹೇಳಲು ಇಚ್ಛಿಸದ ಕರ ವಸೂಲಿಗಾರ