ಮೈಸೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಪ್ರತಿ ತಿಂಗಳು 100 ರೂ. ದೇಣಿಗೆ ಪಡೆಯುವಂತೆ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಆದೇಶಕ್ಕೂ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಆದೇಶವನ್ನು ಕೆಲವರು ಸರಿಯಾಗಿ ಓದಿಕೊಳ್ಳದೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ನಾನು ತಕ್ಷಣ ತಕ್ಷಣ ಆಯುಕ್ತರನ್ನು ಕೇಳಿದೆ. ಎಸ್‌ಡಿಎಂಸಿ ಸಲಹೆ ಮೇರೆಗೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಸುತ್ತೋಲೆ ಹೊರಡಿಸಲು ಆಯುಕ್ತರಿಗೆ ಅವಕಾಶವಿದೆ. ಎಲ್ಲ ಸುತ್ತೋಲೆಗಳನ್ನೂ ಸರ್ಕಾರದ ಗಮನಕ್ಕೆ ತಂದೇ ಹೊರಡಿಸಬೇಕು ಅಂತೇನೂ ಇಲ್ಲ ಎಂದು ಹೇಳಿದರು.
ಶಾಲೆಯ ಅಭಿವೃದ್ಧಿಗೆ ಸ್ಥಳೀಯವಾಗಿ ಹಣ ಸಂಗ್ರಹಿಸಲು ಆರ್‌ಟಿಇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆರ್‌ಟಿಇ ಒಳ್ಳೆಯ ಕಾಯ್ದೆ, ಅದನ್ನು ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರ. ಸುತ್ತೋಲೆಯಲ್ಲಿ ಎಲ್ಲಿಯೂ ಪಾಲಕರು ಕಡ್ಡಾಯವಾಗಿ ಹಣ ಕೊಡಬೇಕು ಎಂದು ಹೇಳಿಲ್ಲ. ಅವರಾಗಿಯೇ ಕೊಟ್ಟರೆ ಮಾಸಿಕ 100 ರೂ. ನೀಡಬಹುದು. ಇದಕ್ಕೆ ರಶೀದಿಯನ್ನು ನೀಡಬೇಕು. ದೇಶದಲ್ಲೇ ಕಾನೂನು ಪಂಡಿತ ಎನಿಸಿಕೊಂಡ ಸಿದ್ದರಾಮಯ್ಯ ಈ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ ಎಂದರು.
ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಪ್ರಾರಂಭ ಮಾಡಲಾಗಿದೆ. ಅವರಿಗೆ ಸಂಭಾವನೆ ಕೊಡುವ ನಿಟ್ಟಿನಲ್ಲಿ ಆಯಾ ಎಸ್‌ಡಿಎಂಸಿ ಸಲಹೆ ಮೇರೆಗೆ 100 ರೂ. ಸಂಗ್ರಹಿಸಲು ಆದೇಶಿಸಲಾಗಿದೆ. ಸುತ್ತೋಲೆ ದುರುಪಯೋಗವಾದರೆ ಹಿಂಪಡೆಯಲಾಗುವುದು ಎಂದು ಹೇಳಿದರು.