ಜಿಲ್ಲೆ

ದಾಖಲೆಯ ಶುಲ್ಕ ಸಂಗ್ರಹ

ಕೊಟ್ಟೂರು: ನಗರದ ಎಪಿಎಂಸಿ 2024-25ರ ಸಾಲಿನ ಮಾರುಕಟ್ಟೆ ಶುಲ್ಕ ಸಂಗ್ರಹ ಹಾಗೂ ಮೆಕ್ಕೆಜೋಳ ಮಾರಾಟದಲ್ಲಿ ವಿಜಯನಗರ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಎಪಿಎಂಸಿ ಅಧ್ಯಕ್ಷ ಹರಾಳು ನಂಜಪ್ಪ ಹೇಳಿದರು.

ಪಟ್ಟಣದ ಮಾರುಕಟ್ಟೆಯಲ್ಲಿ ಗುರುವಾರ ಮಾತನಾಡಿ, ಪ್ರಸಕ್ತ ವರ್ಷ 54 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ 10.32 ಲಕ್ಷ ಕ್ವಿಂಟಾಲ್ ಮೆಕ್ಕೆಜೋಳ ಮಾರಾಟವಾಗಿದ್ದು, ಮಾರುಕಟ್ಟೆ ಇತಿಹಾಸದಲ್ಲಿ ಇದೇ ಪ್ರಥಮ. ಬೆಂಬಲ ಬೆಲೆ ಯೋಜನೆಯಡಿ ಹಗರಿಬೊಮ್ಮನಹಳ್ಳಿ, ಹಡಗಲಿ, ಜಗಳೂರು, ಸಂಡೂರು, ಕೂಡ್ಲಿಗಿ, ಹರಪನಹಳ್ಳಿ ತಾಲೂಕಿನ ರೈತರು ಕೊಟ್ಟೂರು ಎಪಿಎಂಸಿಯಲ್ಲೇ ಮಾರಾಟ ಮಾಡಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚು ಮೆಕ್ಕೆಜೋಳ ಮಾರಾಟವಾದ ಮೊದಲ ಮಾರುಕಟ್ಟೆ ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದರು.

2024-25ನೇ ಸಾಲಿನಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಗಳಿಗೆ ಸರ್ಕಾರ ಒಂದು ಕೋಟಿ ರೂ. ಶುಲ್ಕ ಸಂಗ್ರಹ ಗುರಿ ನೀಡಿತ್ತು. ಆದರೆ, ಪ್ರಸ್ತುತ 2.3 ಕೋಟಿ ರೂ. ಸಂಗ್ರಹಿಸಲಾಗಿದೆ. ಹತ್ತಿ ಬೆಳೆಗೆ ಪ್ರಸಿದ್ಧವಾಗಿದ್ದ ಕೊಟ್ಟೂರು ಈಗ ಮೆಕ್ಕೆಜೋಳದ ಕಣಜವಾಗಿದೆ. ತಮಿಳುನಾಡಿಗೆ ಶೇ.25 ಮೆಕ್ಕೆಜೋಳ ರಫ್ತು ಮಾಡಲಾಗುತ್ತಿದೆ ಎಂದು ನಂಜಪ್ಪ ತಿಳಿಸಿದರು. ಉಪಾಧ್ಯಕ್ಷ ಎಂ.ಶಿವಣ್ಣ, ಕಾರ್ಯದರ್ಶಿ ಎ.ಕೆ.ವೀರಣ್ಣ ಇದ್ದರು.