ಮಲೆ ಮಹದೇಶ್ವರ ಬೆಟ್ಟದ ಮುಡಿಶೆಡ್‌ನಲ್ಲಿ ಮುಡಿಸೇವೆಗೆ ಹಣ ಪಡೆದಿರುವ ಬಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಭಕ್ತರಿಂದ ಮಾಹಿತಿ ಪಡೆದರು. 
ಜಿಲ್ಲೆ

ಮುಡಿಸೇವೆಯಲ್ಲಿ ಭಕ್ತರಿಂದ ಹಣ ವಸೂಲಿ

ನಾಗೇಶ ಎಸ್

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮುಡಿಶೆಡ್‌ಗೆ ಮಂಗಳವಾರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಭೇಟಿ ನೀಡಿ, ಭಕ್ತರಿಂದ ಹೆಚ್ಚಿನ ಹಣ ವಸೂಲಿ ಮಾಡದಂತೆ ನೌಕರರಿಗೆ ಕಟುನಿಟ್ಟಿನ ಸೂಚನೆ ನೀಡಿದರು.

ಪ್ರಾಧಿಕಾರಕ್ಕೆ ಸೇರಿದ ಮುಡಿಶೆಡ್‌ನಲ್ಲಿ ಮುಡಿಸೇವೆಗೆ 50 ರೂ. ನಿಗದಿಪಡಿಸಲಾಗಿದೆ. ಆದರೆ ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಭಕ್ತರಿಂದ 50, 100 ರೂ. ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಭಕ್ತಾದಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಸರಸ್ವತಿ ಅವರು ಬೆಳಗ್ಗೆ ಮುಡಿಶೆಡ್‌ಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಮುಡಿಸೇವೆಗೆ ಒಳಗಾದ ಭಕ್ತರನ್ನು ವಿಚಾರಿಸಿದಾಗ ಹಣ ವಸೂಲಿ ಮಾಡುತ್ತಿರುವುದು ದೃಢಪಟ್ಟಿತು. ಬಳಿಕ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಭಕ್ತರಿಂದ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದರು.

ಭಕ್ತರ ಮುಡಿಸೇವೆಗೆ ಟಿಕೆಟ್ ಮಾತ್ರ ಪಡೆಯಬೇಕು. ಯಾವುದೇ ಕಾರಣಕ್ಕೂ ಹಣ ನೀಡಬಾರದು. ಒಂದು ವೇಳೆ ಇಲ್ಲಿನ ಸಿಬ್ಬಂದಿ ಹಣ ಕೇಳಿದರೆ ನಮ್ಮ ಗಮನಕ್ಕೆ ತರುವಂತೆ ತಿಳಿಸಿದರು. ಇದೇ ವೇಳೆ ಮುಡಿಸೇವೆಗೆ ಪಡೆದ ಹಣವನ್ನು ಭಕ್ತರಿಗೆ ವಾಪಸ್ ಕೊಡಿಸಲಾಯಿತು.

ಇದಾದ ಒಂದು ಗಂಟೆಯ ಬಳಿಕ ಮುಡಿಶೆಡ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಇಲ್ಲಿನ ಸಿಬ್ಬಂದಿ ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಸರಸ್ವತಿ ಅವರು, ಮತ್ತೆ ಮುಡಿಶೆಡ್‌ಗೆ ಭೇಟಿ ನೀಡಿ ಇಲ್ಲಿನ ಉಸ್ತುವಾರಿ ನಾಗರಾಜು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಭಕ್ತರಿಂದ ಹಣ ವಸೂಲಿ ಮಾಡಿದರೆ ಸೂಕ್ತ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.