ಕಾರವಾರ: ನಗರಸಭೆಗೆ ಬರಬೇಕಾದ ಕರ ಹಾಗೂ ಇತರ ಶುಲ್ಕಗಳನ್ನು ಶೀಘ್ರ ವಸೂಲಿ ಮಾಡಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಭರವಸೆ ನೀಡಿದರು.
ನಗರಸಭೆ ಕಚೇರಿಯಲ್ಲಿ ಬುಧವಾರ ಗುತ್ತಿಗೆದಾರರ ಸಭೆ ನಡೆಸಿ ಅವರು ಮಾತನಾಡಿದರು. ಕಾರವಾರ ನಗರಸಭೆಗೆ ವರ್ಷಕ್ಕೆ ಕರ ವಸೂಲಿ ಹಾಗೂ ಇತರ ಶುಲ್ಕಗಳಿಂದ 12 ಕೋಟಿ ರೂ. ಆದಾಯ ಬರಬೇಕು.
ವಿದ್ಯುತ್ ಬಿಲ್, ಇಂಧನ, ಹೊರ ಗುತ್ತಿಗೆ ಪಾವತಿ ಮುಂತಾದ ವೆಚ್ಚಗಳು ಸೇರಿ ಸುಮಾರು 4.44 ಕೋಟಿ ರೂ. ಖರ್ಚಿದೆ. ಆದರೆ, ಈ ಹಿಂದೆ ಸಂಗ್ರಹಿಸಲಾದ ಆದಾಯ ಗರಿಷ್ಠ ಶೇ.50 ಕ್ಕಿಂತ ಕಡಿಮೆ ಇದೆ. ಅದು ನಗರಸಭೆಯ ವಾರ್ಷಿ ಖರ್ಚು ವೆಚ್ಚಗಳಿಗೂ ಸಾಲದು.
ನಗರಸಭೆಯ ನಿಧಿ ಹಾಗೂ ವಿವಿಧ ಯೋಜನೆಗಳಡಿ ಮಾಡಲಾದ ಸುಮಾರು 10 ಕೋಟಿ ರೂ.ಗೂ ಅಧಿಕ ಬಿಲ್ ಪಾವತಿ ಗುತ್ತಿಗೆದಾರರಿಗೆ ಬಾಕಿ ಇದೆ. ನಗರಸಭೆಯ ನಿಧಿಯಿಂದ ಮಾಡಿದ ಯಾವುದೇ ಕಾಮಗಾರಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗದು. ಇದರಿಂದ ನಗರಸಭೆ ಆದಾಯ ಹೆಚ್ಚಿಸಲು ಮೊದಲು ಕ್ರಮ ವಹಿಸಲಾಗುವುದು ಎಂದರು.
ಇದನ್ನೂ ಓದಿ:ವಂದಿಗೆ ರಸ್ತೆಯಲ್ಲಿ ಚಂದ್ರ ಮಂಡಲ ದರ್ಶನ!
ನಗರಸಭೆಗೆ ಬಿಣಗಾದ ಗ್ರಾಸಿಂ ಇಂಡಸ್ಟ್ರೀಸ್, ಕ್ರಿಮ್ಸ್ ಸೇರಿ ವಿವಿಧ ಮೂಲಗಳಿಂದ ಸುಮಾರು 44 ಕೋಟಿ ರೂ. ಆದಾಯ ಬರಬೇಕಿರುವುದು ಬಾಕಿ ಇದೆ. ಅವುಗಳ ವಸೂಲಿಗೆ ಪ್ರಯತ್ನಿಸಲಾಗುವುದು, ಬಿಲ್ ವಸೂಲಿಗಾರರಿಗೆ ಪ್ರತಿ ತಿಂಗಳು ಗುರಿ ನಿಗದಿ ಮಾಡಲು ನಿರ್ಧರಿಸಲಾಗಿದೆ.
ನಾಲ್ಕೈದು ವರ್ಷದಿಂದ ಕರ ಬಾಕಿ ಉಳಿಸಿಕೊಂಡವರು ಒಮ್ಮೆಲೇ ಭರಣ ಮಾಡಿದರೆ ರಿಯಾಯಿತಿ ನೀಡುವ ಯೋಜನೆ ರೂಪಿಸಲಾಗುವುದು. ಒಟ್ಟಿನಲ್ಲಿ ನಗರಸಭೆಗೆ ಜನರಿಂದ ಬರುವ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು.
ಮೊದಲ ಹಂತದಲ್ಲಿ ನಗರಸಭೆ ನಿಧಿಯಿಂದ ಮಾಡಲಾದ ಕಾಮಗಾರಿಗಳಲ್ಲಿ 1 ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲ ಬಿಲ್‌ಗಳನ್ನು ಸಂಪೂರ್ಣವಾಗಿ ತಕ್ಷಣ ಪಾವತಿಸಲಾಗುವುದು.
ನಂತರ ಹೆಚ್ಚಿನ ಮೊತ್ತದ ಬಿಲ್‌ನಲ್ಲಿ ಶೇ. 50 ರಷ್ಟು ಅಥವಾ ಒಂದು ಭಾಗದ ಮೊತ್ತದ ಪಾವತಿಗೆ ಕ್ರಮ ವಹಿಸಲಾಗುವುದು. ನಗರಸಭೆಗೆ ಆದಾಯ ಬಂದಂತೆ ಹಂತ ಹಂತವಾಗಿ ಉಳಿದ ಬಿಲ್ ಬಾಕಿಯನ್ನು ಪಾವತಿಸಲಾಗುವುದು.
ಇದಕ್ಕೆ ಗುತ್ತಿಗೆದಾರರೂ ಸಹಕರಿಸಬೇಕು. ಒಮ್ಮೆಲೇ ಅಷ್ಟೂ ಹಣ ಬೇಕು ಎಂದು ಪಟ್ಟು ಹಿಡಿದರೆ ಸಾಧ್ಯವಿಲ್ಲ ಎಂದರು. ಈಗಾಗಲೇ ಪ್ರಾರಂಭಿಸದ ಯಾವುದೇ ಕಾಮಗಾರಿಗಳಿಗೂ ಸದ್ಯ ಕಾರ್ಯಾದೇಶ ನೀಡುವುದಿಲ್ಲ ಎಂದರು.
ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯ್ಕ ಮಾತನಾಡಿ, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಜಿಲ್ಲಾಧಿಕಾರಿಗಳು ಸಹಕಾರ ನೀಡಬೇಕು ಎಂದರು.
ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ದೀಪಕ ಕುಡಾಳಕರ್, ಪ್ರೀತಮ್ ಮಾಸೂರಕರ್ ಹಾಗೂ ಇತರರು ಇದ್ದರು.